ಮೂಡಿಗೆರೆ : ನೆರೆ ಸಮಯದಲ್ಲಿ ‘ನಮ್ಮುಡುಗ್ರು’ ತಂಡವು ಸಂತ್ರಸ್ತರಿಗೆ ಸಮಾಜಮುಖಿಯಾಗಿ ನೀಡಿದ ಸೇವೆ ಶ್ಲಾಘನೀಯವಾಗಿದೆ : ಎಚ್.ಆರ್.ಪುಟ್ಟಸ್ವಾಮಿಗೌಡ.

562
firstsuddi

ಮೂಡಿಗೆರೆ : ದೇಶಕ್ಕೆ ಯೋಧರು ಗಡಿ ರಕ್ಷಣೆಗೆ ಹೇಗೆ ಕಣ್ಣಾಗಿದ್ದಾರೊ, ಹಾಗೆಯೇ ಮಲೆನಾಡಿನಲ್ಲಿ ಸಂಭವಿಸಿದ ನೆರೆ ಸಮಯದಲ್ಲಿ ‘ನಮ್ಮುಡುಗ್ರು’ ತಂಡವು ಸಂತ್ರಸ್ತರಿಗೆ ಸಮಾಜಮುಖಿಯಾಗಿ ನೀಡಿದ ಸೇವೆ ಶ್ಲಾಘನೀಯವಾಗಿದೆ ಎಂದು ನಿವೃತ್ತ ಶಿಕ್ಷಕರಾದ ಎಚ್.ಆರ್.ಪುಟ್ಟಸ್ವಾಮಿಗೌಡ ಅಭಿಪ್ರಾಯ ಪಟ್ಟರು.
ಬಣಕಲ್‍ನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ “ನೆರೆಯ ನೆನಪುಗಳು” ವಿಶೇಷ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮುಡುಗ್ರು ವಾಟ್ಸಾಪ್ ತಂಡ ಮಲೆನಾಡಿನಲ್ಲಿ ಆಗಸ್ಟ್‍ನಲ್ಲಿ ಸಂಭವಿಸಿದ ಭೂಕುಸಿತ ಸಂದರ್ಭದಲ್ಲಿ ಸ್ವಯಂ ಪ್ರೇರಿತರಾಗಿ ಸಂಕಷ್ಟದಲ್ಲಿ ಸಿಕ್ಕಿದವರ ಪ್ರಾಣ ರಕ್ಷಿಸಿ, ಮಾನವೀಯತೆ ಸೆಲೆಯನ್ನು ಸಮಾಜದಲ್ಲಿ ಬಿಂಬಿಸಿ ಮಾದರಿಯಾಗಿದ್ದಾರೆ. ವಾಟ್ಸಾಪ್ ಸಂದೇಶಗಳ ಮೂಲಕ ಮಣ್ಣಿನಡಿ ಸಿಲುಕಿದ ಪ್ರಾಣಗಳನ್ನು ರಕ್ಷಿಸುವ ಮೂಲಕ ಹೆಚ್ಚು ಪ್ರಾಣ ಹಾನಿ ಸಂಭವಿಸದಂತೆ ಉತ್ತಮ ಸೇವೆ ನೀಡಿರುವುದು ಉತ್ತಮ ಕಾರ್ಯವಾಗಿದ್ದು, ದೇಶದ ಯೋಧರಂತೆ ಸಮಾಜದಲ್ಲಿ ಅಲೆ ಮೂಡಿಸಿರುವುದು ನಿಜಕ್ಕೂ ತೃಪ್ತಿಕರ ಸೇವೆಯಾಗಿದೆ ಎಂದರು.
ಬಣಕಲ್ ಮಾಜಿ ಯೋಧರಾದ ಎನ್.ಟಿ.ದಿನೇಶ್ ಅವರು ಮಾತನಾಡಿ, ಮಲೆನಾಡಿನಲ್ಲಿ ಸಂಭವಿಸಿದ ನೆರೆ ಹಾಗೂ ಭೂಕುಸಿತಕ್ಕೆ ಇಡೀ ರಾಜ್ಯವೇ ಉತ್ತಮವಾಗಿ ಸ್ಪಂಧಿಸಿದೆ. ಹಲವಾರು ದಾನಿಗಳು, ಸಂಘ ಸಂಸ್ಥೆಗಳು ದಿನಿತ್ಯದ ಆಹಾರ ಸಾಮಾಗ್ರಿ ಮತ್ತಿತರ ವಸ್ತುಗಳನ್ನು, ಸಹಾಯಧನವನ್ನು ನೀಡಿ ಮನುಷ್ಯತ್ವ ಮೆರೆದಿವೆ. ಎಲ್ಲರೂ ಒಂದೇ ಭಾವನೆಯಿಂದ ಸಂತ್ರಸ್ತರಿಗೆ ನೆರವಾಗಿರುವುದು ಸೌಹಾರ್ಧತೆಗೆ ಪ್ರೇರಣೆಯಾಗಿದೆ. ನಮ್ಮುಡುಗ್ರು ತಂಡ ಸಂದೇಶಗಳ ಮೂಲಕ ಸಂತ್ರಸ್ತರಿಗೆ ನೆರವಾಗಿರುವುದು ಇಡೀ ಸಮಾಜದಲ್ಲಿ ಹೊಸ ಅಧ್ಯಾಯವನ್ನೇ ಸೃಷ್ಟಿಸಿದೆ ಎಂದರು.
ದರ್ಪಣ ಪತ್ರಿಕೆಯ ಸಂಪಾದಕ ಪ್ರಸನ್ನ ಗೌಡಹಳ್ಳಿ ಮಾತನಾಡಿ, ನೆರೆಯಿಂದ ಹಾನಿಯಾದ ವರದಿಯು ಮಾಧ್ಯಮಗಳಲ್ಲಿ ಬಿತ್ತರಿಸಿದಾಗ ಇಡೀ ರಾಜ್ಯವೇ ಸಹಾಯಕ್ಕೆ ಮುಂದಾಯಿತು. ಇದರಲ್ಲಿ ಮಾಧ್ಯಮದವರ ಸಹಕಾರವೂ ಮರೆಯುವಂತಿಲ್ಲ. ಮೂಡಿಗೆರೆ ಜೇಸಿಐ ಸಂಸ್ಥೆಹಾಗೂ ನಳಂದ ಶಾಲೆ ತಮ್ಮ ಕೊಠಡಿಗಳಲ್ಲಿ ನೆರೆ ಸಂತ್ರಸ್ತರಿಗೆ ಬಂದ ಆಹಾರ ಸಾಮಾಗ್ರಿ, ಬಟ್ಟೆ ಮತ್ತಿತರ ವಸ್ತುಗಳನ್ನು ದಾಸ್ತಾನು ಮಾಡಲು ಉಚಿತವಾಗಿ ಸಹಕಾರ ಮಾಡಿದರು. ನೆರೆ ಸಂತ್ರಸ್ತರು ಯಾವುದೇ ಕಾರಣಕ್ಕೂ ಧೈರ್ಯಗೆಡದೇ ಆತ್ಮಸ್ಥೈರ್ಯ ತುಂಬಲು ಈ ವೇದಿಕೆ ಸಾಕ್ಷಿಯಾಗಿದೆ ಎಂದರು. ಬಣಕಲ್ ಜೆಸಿಐ ವಿಸ್ಮಯದ ಅಧ್ಯಕ್ಷ ವಾಟೇಖಾನ್ ರವಿ ಮಾತನಾಡಿದರು.
ನಮ್ಮುಡುಗ್ರು ತಂಡದ ಅಧ್ಯಕ್ಷ ಮಗ್ಗಲಮಕ್ಕಿ ದಿವಿನ್ ಮಾತನಾಡಿ, ನಮ್ಮ ಗ್ರೂಪ್‍ನಲ್ಲಿ 250 ಜನರ ತಂಡ ಇದ್ದು ಸಮಾಜ ಸೇವೆಗೆ ನಾವು ಸದಾ ಸಿದ್ದರಿದ್ದೇವೆ.ನೆರೆ ಸಂತ್ರಸ್ತರಿಗೆ ನೆರವು ನೀಡಲು ತಲಾ ಮೂವತ್ತು ಕುಟುಂಬಗಳಿಗೆ ತಲಾ 10 ಸಾವಿರದಂತೆ ಹಣ ಸಂಗ್ರಹಿಸಿ ನೀಡುತ್ತಿದ್ದೇವೆ.ಇದು ಆತ್ಮಸ್ಥರ್ಯಕ್ಕಾಗಿ ನಾವು ಕೊಡುವ ಅಲ್ಪ ಕಾಣಿಕೆಯಾಗಿದೆ.ಸಂತ್ರಸ್ತರು ನೋವು ಮರೆತು ಹೊಸ ಜೀವನ ಸಾಗಿಸಲು ಪ್ರಯತ್ನಿಸಬೇಕು. ಸಂತ್ರಸ್ತರರೊಂದಿಗೆ ನಮ್ಮ ತಂಡ ಸದಾ ಇರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂತ್ರಸ್ತರು ನೆರೆ ಸಮಯದಲ್ಲಿ ಸಂಭವಿಸಿದ ಸಂಕಷ್ಟಗಳನ್ನು ಕಣ್ಣೀರಿನ ಮೂಲಕ ತಮ್ಮ ನೋವುಗಳನ್ನು ಹೊರಹಾಕಿದರು. ಸಮಾರಂಭದಲ್ಲಿ ತಂಡದ ಸದಸ್ಯರಾದ ವಿನಯರಾಜ್, ಆದರ್ಶ ತರುವೆ, ಸಂಜಯ್‍ಗೌಡ, ಟಿ.ಎಂ.ಗಜೇಂದ್ರಗೌಡ, ಕವೀಶ್, ರವಿಶಂಕರ್, ಲವಕುಮಾರ್, ಅಭಿಲಾಷ್, ಅಕ್ಷತ್‍ಪಟ್ಟದೂರು, ಸುಬ್ರಮಣ್ಯ ತ್ರಿಪುರ, ಪುಣ್ಯ ಬೆಟ್ಟಗೆರೆ, ಮನೋಜ್, ನಿಶಾಂತ್, ಉತ್ತಮ್, ಚಂದನ್, ಅಖಿಲ್, ರಾಘವೇಂದ್ರ, ಕೌಶಿಕ್, ಬಾಳೂರು ಆದರ್ಶ,s ಸುರೇಂದ್ರ, ರಚನ್, ಪರೀಕ್ಷಿತ್, ಅನೂಪ್, ಬಿ.ಎಸ್.ಕಲ್ಲೇಶ್, ಸತೀಶ್, ನಾಗರಾಜ್ ಬಾಳೂರು, ಬಾಲುಶೆಟ್ಟಿ, ಮೋಹನ್, ಗೌತಮ್ ಹಾಗೂ ನಮ್ಮುಡುಗ್ರು ತಂಡದ ಇತರ ಸದಸ್ಯರು ಇದ್ದರು.