ಮೂಡಿಗೆರೆ : ಪೆಬ್ರವರಿ 9 ರಂದು ಮಲೆನಾಡಿನ ಹಸಿರ ನಿಸರ್ಗದ ಕೆಳಗೂರು ಗ್ರಾಮದಲ್ಲಿ ಭಾವೈಕ್ಯತೆಯ ಗವಿ ಉತ್ಸವ…

356

ಮೂಡಿಗೆರೆ : ತಾಲ್ಲೂಕಿನ ಕೆಳಗೂರು ಎಂಬ ಪುಟ್ಟ ಗ್ರಾಮ ಟೀ ಮತ್ತು ಕಾಫಿ ಬೆಳೆಯ ತವರು. ಕಾಫಿ ಹಾಗೂ ಟೀ ಘಮಲು ಮೂಗಿಗೆ ಸೋಕಿದಾಗ ಮನದಲ್ಲಾಗುವ ಆಹ್ಲಾದದ ಪರಿಯೇ ಬೇರೆ. ಅದರಲ್ಲಿ ಟೀ ತೋಟದ ಸೌಂದರ್ಯ ಪ್ರವಾಸಿಗರನ್ನು ಮನ ಸೆಳೆಯುವ ಪ್ರಮುಖ ತಾಣವಾಗಿ ಪರಿಣಮಿಸಿದೆ. ಅಂತಹ ಹಸಿರ ತಾಣದಲ್ಲಿ ಮಾತೆ ಮರಿಯಮ್ಮನವರ ಗವಿ ಉತ್ಸವವು ದೈವಿಕವಾಗಿಯು ಹಾಗೂ ಭಾವೈಕ್ಯತೆಯಿಂದ ಪ್ರಸಿದ್ಧಿ ಪಡೆದಿದೆ. ಅನೇಕ ಭಕ್ತಾದಿಗಳನ್ನು ಕೈ ಬೀಸಿ ಕರೆಯುವ ಜಾವಳಿಯ ಕೆಳಗೂರು ತಾಣ ಫೆಬ್ರವರಿ 9 ರಂದು ಗವಿ ಉತ್ಸವಕ್ಕೆ ಸಜ್ಜಾಗಿ ಸಂಭ್ರಮದಿಂದ ಆಚರಣೆ ಮಾಡುತ್ತಾರೆ.
ಕೆಳಗೂರು ಟೀ ತೋಟದ ಪ್ರವೇಶ ದ್ವಾರದ ಬಳಿ ಇರುವ ಮಾತೆ ಮರಿಯಮ್ಮನವರ (ಗ್ರೊಟ್ಟೊ)ಗವಿಯು ವಿದ್ಯುತ್ ಅಲಂಕಾರ ಹಾಗೂ ಹೂವಿನಿಂದ ಶೃಂಗರಿಸಿ ಅಂದು ಭಕ್ತರನ್ನು ವಿಶೇಷವಾಗಿ ಆಕರ್ಷಿಸುತ್ತದೆ. ಟೀ ತೋಟದ ಹಚ್ಚ ಹಸಿರ ಸೌಂದರ್ಯದ ನಡುವೆ ಉತ್ಸವ ಕಳೆ ಗಟ್ಟುತ್ತದೆ. ಕಾರ್ಮಿಕರ ಹಿತ ಬಯಸುವ ಸಲುವಾಗಿ ಮಾತೆ ಮರಿಯಮ್ಮನವರ ಗವಿ ಇಲ್ಲಿ ಪ್ರತಿಷ್ಟಾಪಿಸಿ ನಿತ್ಯ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಾರೆ. ಟೀ ತೋಟಕ್ಕೆ ಪ್ರವೇಶ ಮಾಡುವ ಮುನ್ನ ಮಾತೆಯನ್ನು ನನೆದೇ ಒಳ ನಡೆಯಬೇಕಾಗುತ್ತದೆ. ನಂಬಿದ ಭಕ್ತರಿಗೆ ಸದಾ ಒಳಿತು ಕರುಣಿಸುವ ಅವರ ಮಹಿಮೆ ಅಪಾರ.

ಬಹಳ ವರ್ಷಗಳ ಹಿಂದೆ ಕೆಳಗೂರು ಟೀ ಮತ್ತು ಕಾಫಿ ತೋಟದಲ್ಲಿ ಸಹಸ್ರಾರು ಕಾರ್ಮಿಕರು ಇಲ್ಲಿ ಆಶ್ರಯ ಪಡೆದು ದುಡಿಮೆ ಮಾಡಿ ಸಾಗಿಸಿದ್ದಾರೆ. ಇಲ್ಲಿ ನಡೆಯುವ ಗವಿ ಉತ್ಸವದಂದು ಸಂಜೆ ಸರ್ವ ಭಕ್ತರಿಗೆ ಹೀರೆಬೈಲ್ ಧರ್ಮಕೇಂದ್ರದ ಧರ್ಮಗುರು ವಂದನೀಯ ಜಾರ್ಜ್ ಅಂದ್ರಾದೆ ಅವರು ಸಂಭ್ರಮಿಕ ಬಲಿ ಪೂಜೆ ಅರ್ಪಿಸಿ ಉತ್ತಮ ಪ್ರಬೋಧನೆ ನೀಡುತ್ತಾರೆ. ಸರ್ವ ಜನರು ಸುಖವಾಗಿರಲೆಂಬ ಆಶಯ ಈಡೇರಲು ಇಲ್ಲಿ ಮಾತೆ ಮರಿಯಮ್ಮನವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಗವಿಯ ಉತ್ಸವಕ್ಕೆ ಸ್ಥಳೀಯರು ಮಾತ್ರವಲ್ಲದೇ ಮರಿಯಮ್ಮನನ್ನು ನಂಬಿದ ದೂರದ ಭಕ್ತರು ಹರಕೆ ತೀರಿಸುವುದಕ್ಕೂ ಈ ತಾಣ ಮಹತ್ವ ಪಡೆದಿದೆ. ಕೆಳಗೂರು ತೋಟದ ಆಡಳಿತ ಮಂಡಳಿ, ನೌಕರರ ಸಂಘ ಹಾಗೂ ಕಾರ್ಮಿಕರ ಸಂಘ ಮತ್ತು ಗ್ರಾಮಸ್ಥರು ಒಟ್ಟಾಗಿ ಈ ಉತ್ಸವವನ್ನು ಅದ್ದೂರಿಯಿಂದ ನಡೆಸುತ್ತಾರೆ. ಸಂಜೆ ಸರ್ವರೂ ಒಟ್ಟಾಗಿ ಸಮಾವೇಶಗೊಂಡು ಸಾಮೂಹಿಕ ಬೋಜನ ಸೇವಿಸುವುದು ಭಾವೈಕ್ಯತೆಯ ಮತ್ತೊಂದು ವಿಶೇಷತೆಯಾಗಿದೆ ಎನ್ನುತ್ತಾರೆ ಸಹ ವ್ಯವಸ್ಥಾಪಕ ವಲೇರಿಯನ್ ಪಿರೇರಾ.
ಕೆಳಗೂರಿನಲ್ಲಿ ಮೂರು ದಶಕಗಳ ಹಿಂದೆ ಮಾತೆ ಮರಿಯಮ್ಮನವರ ಗವಿ ಸ್ಥಾಪನೆಯಾಗಿದೆ. ಬೇಡಿದ ಭಕ್ತರಿಗೆ ಸಕಲ ವರದಾನ ನೀಡುವ ಈ ಮಾತೆ ಮರಿಯಮ್ಮನವರ ಉತ್ಸವಕ್ಕೆ ಸರ್ವರೂ ಭಾವೈಕ್ಯತೆಯಿಂದ ಸೇರಿ ಉತ್ಸವ ಆಚರಿಸುವ ಪದ್ಧತಿಯು ಕೆಳಗೂರಿನಲ್ಲಿ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಮರಿಯಮ್ಮನವರಲ್ಲಿ ಬೇಡಿದ ವರದಾನಗಳು ಈಡೇರಿದ ಭಕ್ತರು ಗವಿಯ ಬಳಿ ಮೇಣದ ಭತ್ತಿ ಹೊತ್ತಿಸಿ ಗೌರವ ನೀಡುತ್ತಾರೆ ಎಂದು ಕೆಳಗೂರಿನ ಕಾರ್ಮಿಕ ಜಾನ್‍ನೊರೋನ್ಹಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.