ಮೂಡಿಗೆರೆ : ಮನೆಯೇ ಮೊದಲ ಪಾಠಶಾಲೆ ಎಂಬಂತೆ ಮಕ್ಕಳಿಗೆ ಭವಿಷ್ಯದಲ್ಲಿ ಶಿಕ್ಷಣವೇ ಸಾಧನೆಯ ಮೊದಲ ಮೆಟ್ಟಿಲಾಗಿದೆ ಎಂದು ಕಿರುತರೆ ಹಾಗೂ ಚಲನಚಿತ್ರ ನಟಿ ಗಾನವಿ ಸುರೇಶ್ ಹೇಳಿದರು.
ಕೊಟ್ಟಿಗೆಹಾರದ ಅತ್ತಿಗೆರೆ ಸರ್ಕಾರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಾಂಸ್ಕೃತಿಕ ಹಬ್ಬದ ‘ಚಿಗುರು’ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಯಲ್ಲಿ ಓದಿ ನಟನೆಯ ಹಾದಿ ಹಿಡಿದು ಗುರುತಿಸಿಕೊಂಡಿದ್ದೇನೆ ಎಂದರೆ ಅದು ಈ ಶಾಲೆಯ ಮೂಲ ಶಿಕ್ಷಣವೇ ಸಾಧನೆಯ ಬುನಾದಿಯಾಗಿದೆ. ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆ ಎಂಬ ಕೀಳರಿಮೆ ದೂರ ಮಾಡಬೇಕು. ಶಿಕ್ಷಣ ಪಡೆಯಲು ಶಾಲೆಗಳು ಒಂದೇ ಕಾರಣವಾಗಿರುವುದಿಲ್ಲ. ಮನೆಯ ಹಾಗೂ ಸುತ್ತಮುತ್ತಲಿನ ವಾತಾವರಣ ಕೂಡ ಕಾರಣವಾಗಬಲ್ಲುದು. ಆದರೆ ಪೋಷಕರು ಖಾಸಗಿ ಶಾಲೆಗೆ ಸೇರಿಸಿದರೆ ಮಾತ್ರ ತಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಬಲ್ಲರು ಎಂಬ ಮೂಢನಂಬಿಕೆ ಹೊಂದಿದ್ದಾರೆ. ಸಮಾಜದಲ್ಲಿ ಉತ್ತಮ ಸಾಧನೆ ಮಾಡಿದವರು ಸರಕಾರಿ ಶಾಲೆಯಲ್ಲಿ ಓದಿದವರೇ ಎಂಬುವುದನ್ನು ಯಾರೂ ಮರೆಯಬಾರದು. ಖಾಸಗಿ ಶಾಲೆಗಳ ಮೇಲೆ ಅಭಿಮಾನ ತೋರುವುದರ ಬದಲು ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತ, ಮಕ್ಕಳ ಓದಿಗೆ ಬೇಕಾದ ಪೂರಕ ಅಂಶಗಳ ಕಡೆ ಗಮನ ಹರಿಸಿದರೆ ಒಳಿತು ಎಂದು ಸಲಹೆ ನೀಡಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ.ರತನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಶಿಕ್ಷಣವೇ ಎಲ್ಲದಕ್ಕೂ ಆಸರೆ. ಸರ್ಕಾರಿ ಶಾಲೆಯಲ್ಲಿ ಓದಿ ಉನ್ನತ ಮಟ್ಟಗಳಲ್ಲಿ ಪ್ರತಿಭೆಗಳು ಗುರುತಿಸುವಂತಾಗಿದೆ ಎಂದರೆ ಅದರಲ್ಲಿ ಶಾಲಾ ಶಿಕ್ಷಕರ ಮತ್ತು ಪೋಷಕರ ಅಪಾರ ಶ್ರಮ ಅಡಗಿದೆ. ಶಿಕ್ಷಣವೇ ಸಾಧನೆಯ ಮೂಲ ತಂತ್ರವಾಗಿದೆ. ಇಂದಿನ ದಿನಗಳಲ್ಲಿ ಶಿಕ್ಷಣ ಇಲ್ಲದೆ ಉತ್ತಮ ಬದುಕು ಕಟ್ಟಿಕೊಳ್ಳಲು ಅಸಾಧ್ಯವಾಗಿದೆ. ಓದಿಗೆ ಯಾವತ್ತಿಗೂ ಬೆಲೆ ಇದ್ದೇ ಇರುತ್ತದೆ. ತಮ್ಮ ವೈಯಕ್ತಿಕ ಕಾರಣಗಳನ್ನು ನೀಡಿ ಮಕ್ಕಳ ಬದುಕಿಗೆ ಪೋಷಕರು ತೊಡಕಾಗಬಾರದು. ಪುರಾತನ ಕಾಲದಿಂದಲೂ ಓದಿಗೆ ವಿಶೇಷವಾದ ಮಹತ್ವ ಇದೆ ಇದನ್ನು ಅರಿತು ತಮ್ಮ ಮಕ್ಕಳ ಬದುಕಿಗೆ ದಾರಿ ದೀಪವಾಗಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಪ್ರಧಾನ ಕಾರ್ಯದರ್ಶಿ ಮಂಜಪ್ಪ, ಸಾಹಿತಿ ಪೂರ್ಣೇಶ್ ಮತ್ತಾವರ, ತರುವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರವಿಕಲಾ ಪೈ, ಮಾಜಿ ಅಧ್ಯಕ್ಷ ಬಿ.ಎಂ.ಭರತ್, ಬಿ.ಎಂ.ಸತೀಶ್, ಹಿರಿಯರಾದ ಟಿ.ಎ.ಖಾದರ್, ಶಾಲಾ ಸಮಿತಿಯ ಅಧ್ಯಕ್ಷ ಕಾಂತರಾಜು, ಟಿ.ಎಂ.ಗಜೇಂದ್ರ, ಸಂಜಯ್‍ಗೌಡ, ಮುಖ್ಯ ಶಿಕ್ಷಕ ರಾಜು, ಶಿಕ್ಷಕ ಪ್ರತೀಕ್, ಕುಮಾರ್, ಹಂಸಲೇಖ, ಶೀಲಾ, ಮೈಮುನಾಭಿ, ಕವಿತಾ, ಟಿ.ಎಂ.ನರೇಂದ್ರ, ಗೋಪಾಲ್‍ಗೌಡ, ಸುರೇಶ್, ಲಲಿತ, ವೇಣುಗೋಪಾಲ್ ಪೈ, ನಾಗೇಶ್, ಕೃಷ್ಣಮೂರ್ತಿ ಹಾಗೂ ಪೋಷಕರು ಇದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆ ಎಂಬ ಕೀಳರಿಮೆ...










