ಮೂಡಿಗೆರೆ : ಬಡವನದಿಣ್ಣೆ ಬಳಿ ಮುಖಾಮುಖಿ ಕಾರು ಡಿಕ್ಕಿ:ಯುವಕ ಸಾವು.

42
ಕೊಟ್ಟಿಗೆಹಾರ ..ಕಾಫಿನಾಡಿನಲ್ಲಿ ನಿರಂತರ ಮಳೆ ಆರ್ಭಟಿಸುತ್ತಿರುವ ನಡುವೆ ಮೂಡಿಗೆರೆ ತಾಲೂಕಿನ  ಬಡವನದಿಣ್ಣೆ ರಾಷ್ಟ್ರೀಯ ಹೆದ್ದಾರಿ 173 ರಲ್ಲಿ  ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಮಳೆಯಿಂದ ಹೆದ್ದಾರಿಯಲ್ಲಿ ನೀರು ನಿಂತ ಪರಿಣಾಮ ನಿಯಂತ್ರಣ ತಪ್ಪಿದ ಕಾರು ಎದುರಿನಿಂದ ಬಂದ ಇನ್ನೊಂದು ಕಾರಿಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ, ಭಾರೀ ರಭಸಕ್ಕೆ ಎರಡು ವಾಹನಗಳು ನಜ್ಜುಗುಜ್ಜಾಗಿವೆ.
ಅಪಘಾತದಲ್ಲಿ ಬಾಳೂರು ಹೋಬಳಿಯ ಹುಯಿಲು ಮನೆ ಮೂಲದ ಅಕ್ಷಯ್ (25) ಎಂಬ ಯುವಕ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ವಿಕಾಸ್ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಪ್ರಯಾಣಿಕರೂ ಪೆಟ್ಟಾಗಿದ್ದು, ಅವರನ್ನು ಮಂಗಳೂರು, ಹಾಸನ ಹಾಗೂ ಬೆಂಗಳೂರಿನ ವಿವಿಧ ಆಸ್ಪತ್ರೆಗೆ ತುರ್ತುವಾಗಿ ರವಾನಿಸಲಾಗಿದೆ.
ಘಟನೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಳೆಯಿಂದಾಗಿ ಹೆದ್ದಾರಿಯಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.