ಮೂಡಿಗೆರೆ : ಬಣಕಲ್ ಆಟದ ಮೈದಾನ ಸಾರ್ವಜನಿಕರಿಗೆ ಮೀಸಲಿರಿಸುವಂತೆ ಗ್ರಾ.ಪಂ ಸದಸ್ಯರಿಂದ ಶಾಸಕರಿಗೆ ಪತ್ರ…

255
firstsuddi

ಕೊಟ್ಟಿಗೆಹಾರ : ಬಣಕಲ್ ಗ್ರಾಮದ ಸರ್ವೆ ನಂ 353 ರಲ್ಲಿರುವ ಸಾರ್ವಜನಿಕ ಆಟದ ಮೈದಾನದಲ್ಲಿ ಪೋಲಿಸ್ ಇಲಾಖೆ ಬೇಲಿ ಹಾಕಲು ಮುಂದಾಗಿದ್ದು, ಆಟದ ಮೈದಾನವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಪಕ್ಕಾ ಪೋಡ್ ಬದಲಾಯಿಸಿ ಕೊಡದಿದ್ದರೆ ಸಾಮೂಹಿಕ ರಾಜಿನಾಮೆ ನೀಡುವುದಾಗಿ ಬಣಕಲ್ ಗ್ರಾ.ಪಂ ಸರ್ವ ಸದಸ್ಯರು ತಿಳಿಸಿದ್ದಾರೆ.
ಈ ಬಗ್ಗೆ ಬಣಕಲ್ ಗ್ರಾ.ಪಂಯ ಸರ್ವ ಸದಸ್ಯರು ಶಾಸಕ ಎಂ.ಪಿ ಕುಮಾರಸ್ವಾಮಿ ಅವರಿಗೆ ಪತ್ರವನ್ನು ನೀಡಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಬಣಕಲ್ ಗ್ರಾ.ಪಂ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ, ಬಣಕಲ್ ಗ್ರಾ.ಪಂಯ ಸರ್ವೆ ನಂ 353 ರಲ್ಲಿ ಈ ಹಿಂದಿನಿಂದಲೂ ಸಾರ್ವಜನಿಕರ ಅನುಕೂಲಕ್ಕಾಗಿ ಆಟದ ಮೈದಾನವಿದ್ದು ಸದರಿ ಆಟದ ಮೈದಾನದಲ್ಲಿ ಹಲವಾರು ವರ್ಷಗಳಿಂದ ಸ್ಥಳಿಯರು ಕ್ರೀಡೆಗಳಿಗೆ ಸಂಬಂಧಿಸಿದ ಹಲವಾರು ಕ್ರೀಡೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಈಗ ಈ ಮೈದಾನದಲ್ಲಿ ಪೋಲಿಸ್ ಇಲಾಖೆ, ಗ್ರಾ.ಪಂ ಮತ್ತು ಸಾರ್ವಜನಿಕರ ಗಮನಕ್ಕೆ ತರದೆ ಪಕ್ಕಾ ಪೋಡ್ ಮಾಡಿದ್ದು ಮೈದಾನ ಸುತ್ತ ಬೇಲಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಆಟದ ಮೈದಾನವೆ ಇಲ್ಲದಂತಾಗಿದೆ ಎಂದರು.
ಈ ಬಗ್ಗೆ ಸಚಿವರು, ಜಿಲ್ಲಾಧಿಕಾರಿಗಳು, ತಹಶೀಲ್ದಾಋ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಮಂಗಳವಾರ ಬಣಕಲ್ ಗ್ರಾ.ಪಂ ಸರ್ವ ಸದಸ್ಯರು ಸಭೆ ನಡೆಸಿದ್ದು ಮುಂದಿನ 15 ದಿನದೊಳಗೆ ಪೋಲಿಸ್ ಇಲಾಖೆಗೆ ಮಂಜೂರು ಮಾಡಿರುವ ಜಾಗವನ್ನು ಉಳಿದಿರುವ ಸರ್ಕಾರಿ ಜಾಗಕ್ಕೆ ಸ್ಥಳಾಂತರಿಸಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಆಟದ ಮೈದಾನದ ಜಾಗವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಪಕ್ಕ ಪೋಡ್ ಬದಲಾಯಿಸಿ ಕೊಡದಿದ್ದರೆ ಬಣಕಲ್ ಗ್ರಾ.ಪಂ ಸರ್ವ ಸದಸ್ಯರು ಗ್ರಾ.ಪಂ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಲಕ್ಷ್ಮಿ ಹಾಗೂ ಸದಸ್ಯರು ಇದ್ದರು.