ಮೂಡಿಗೆರೆ : ಮಕ್ಕಳಿಗೆ ಸಮಾಜದಲ್ಲಿನ ಒಳಿತು ಕೆಡುಕಿನ ಬಗ್ಗೆ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ : ಎಂ.ಕೆ.ಪ್ರಾಣೇಶ್.

440
firstsuddi

ಮೂಡಿಗೆರೆ : ಇಂಗ್ಲೀಷ್ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿ ಗ್ರಾಮೀಣ ಭಾಗದ ಪ್ರಾಕೃತಿಯ ಮಡಿಲಿನಿಲ್ಲಿ ವಿದ್ಯಾಭ್ಯಾಸ ಮಾಡುವ ಅವಕಾಶದಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ಇದರ ಜೊತೆಗೆ ಸಮಾಜದಲ್ಲಿನ ಒಳಿತು ಕೆಡುಕಿನ ಬಗ್ಗೆ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂಕೆ.ಪ್ರಾಣೇಶ್ ಅವರು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಾಚಗೊಂಡನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗ ಇವರಗಳ ಸಂಯುಕ್ತ ಆಶ್ರಯದಲ್ಲಿ ವಿಜೃಂಭಣೆಯ ಬೆಳ್ಳಿಹಬ್ಬದ ಮಹೋತ್ಸವದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲಾ ವಿದ್ಯಾರ್ಥಿಗಳು ಓದಿನಲ್ಲಿ ಮುಂದಿರಬೇಕು ಎಂದೇನಿಲ್ಲ. ಆದರೆ ಅವರ ನೆಚ್ಚಿನ ವಿಷಯಗಳಲ್ಲಿ ಅವರು ಮುಂದಿರುತ್ತಾರೆ. ಇಂಥಹ ವಿಷಯಗಳನ್ನು ಅರಿತು ಪೋಷಕರು ಮತ್ತು ಶಿಕ್ಷಕರು ಅವರ ಸಾಧನೆಗೆ ಬೆನ್ನೆಲುಬಾಗಿ ನಿಲ್ಲಬೇಕು.
ಓದಿನಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿಕೊಂಡು ಡಾಕ್ಟರ್, ಲಾಯರ್, ಇಂಜಿನಿಯರ್, ಕಂಪೆನಿಗಳ ಸಿಇಓ ಗಳಾದರೆ ಶ್ರೀಮಂತಿಕೆ ಎಂದು ಗುರುತಿಸಿ ಗೌರವಿಸುವುದು ನಮ್ಮ ಸಂಪ್ರದಾಯವಾಗಿದೆ. ಕ್ಷೇತ್ರ ಯಾವುದೇ ಆಗಲಿ ಉತ್ತಮ ಸಾಧನೆ ಮಾಡಿದ ಯಾವುದೇ ಕಾರ್ಯಗಳು ಪ್ರಶಂಸೆಗೆ ಒಳಗಾಗಬೇಕು. ವಿದ್ಯೆಗಿಂತ ಮಿಗಿಲಾದ ಸಾಧನೆ ಮತ್ತೊಂದಿಲ್ಲ. ಅದು ಓದು ಬರಹ ಬರಬೇಕು ಎಂದೇನಿಲ್ಲ. ಆದರೆ ಸಾಧಿಸುವ ಛಲ, ನಿರಂತರ ಕಲಿಕೆಯ ತುಟಿತ ಇರುವ ಯಾವುದೇ ವ್ಯಕ್ತಿಗಾದರೂ ಬೆಲೆ ನೀಡುವ ಮನೋಗುಣ ಎಲ್ಲರಲ್ಲಿ ಬೆಳೆಯಬೇಕು.
ನಗರ ಪ್ರದೇಶಗಳಲ್ಲಿ ಲಕ್ಷಾಂತರ ರೂಪಾಯಿಗಳ ಸಂಬಳವನ್ನು ಬಿಟ್ಟು ತಮ್ಮನ್ನು ಸಾಕಿ ಬೆಳೆಸಿದ ಕೃಷಿಯನ್ನು ಅಪ್ಪಿಕೊಂಡು ಸಾಧನೆ ಮಾಡಿದ ಅನೇಕರು ನಮ್ಮ ಕಣ್ಣಮುಂದಿದ್ದಾರೆ. ಇಂಥಹ ಸಾಧಕರು ನಮಗೆ ಮಾದರಿಯಾಗಬೇಕೇ ಹೊರತು ಸಮಾಜಕ್ಕೆ ಕಂಟಕ ಪ್ರಾಯರಾದ ವ್ಯಕ್ತಿಗಳು ಮಾದರಿಯಾಗಬಾರದು. ಸಮಾಜದಲ್ಲಿ ಒಳ್ಳೆಯ ಹಾಗೂ ಕೆಟ್ಟ ಎರಡೂ ಅಂಶಗಳು ಕೂಡ ಇರುತ್ತವೆ. ಇವುಗಳ ಆಯ್ಕೆ ಮಾಡಿಕೊಳ್ಳುವ ಭರದಲ್ಲಿ ಮಕ್ಕಳು ದಾರಿ ತಪ್ಪುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂಥಹ ಸೂಕ್ಕ್ಮವಿಚಾರಗಳ ಬಗ್ಗೆ ಹಿರಿಯರು, ಪೋಷಕರು, ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಬೇಕು. ಆಗ ಮಾತ್ರ ಉತ್ತಮ ಪ್ರಜೆಗಳನ್ನು ದೇಶಕ್ಕೆ ಕೊಡುಗೆ ನೀಡಿದಂತೆ ಆಗುತ್ತದೆ ಎಂದು ಮಾರ್ಗದರ್ಶನ ಮಾಡಿದರು.