ಮೂಡಿಗೆರೆ :ಮದುವೆಗೆ ಇನ್ನೇನು ಒಂದು ತಿಂಗಳು… ನಿಶ್ಚಿತಾರ್ಥವಾಗಿದ್ದ ಯುವಕ ಆತ್ಮಹತ್ಯೆ.

2

ಮೂಡಿಗೆರೆ: ಒಂದು ತಿಂಗಳ ಹಿಂದಷ್ಟೇ ಮದುವೆ ನಿಶ್ಚಯವಾಗಿ, ನಿಶ್ಚಿತಾರ್ಥ ನೆರವೇರಿದ್ದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಮಧುಗುಂಡಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು 25 ವರ್ಷದ ಅಭಿಷೇಕ್ ಎಂದು ಗುರುತಿಸಲಾಗಿದೆ. ಕಳೆದ ತಿಂಗಳಷ್ಟೇ ಅಭಿಷೇಕ್‌ಗೆ ಮದುವೆ ನಿಶ್ಚಯವಾಗಿದ್ದು, ಅಕ್ಟೋಬರ್ 25ರಂದು ಮದುವೆ ದಿನಾಂಕವೂ ನಿಗದಿಯಾಗಿತ್ತು. ಎರಡೂ ಕುಟುಂಬಗಳು ಮದುವೆ ಸಿದ್ಧತೆಯಲ್ಲಿ ತೊಡಗಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ನಾಲ್ಕು ದಿನಗಳ ಹಿಂದೆ ಅಭಿಷೇಕ್ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ತಕ್ಷಣ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಆದರೆ ನಾಲ್ಕು ದಿನಗಳ ನಿರಂತರ ಚಿಕಿತ್ಸೆಯ ಬಳಿಕವೂ ಚಿಕಿತ್ಸೆ ಫಲಕಾರಿಯಾಗದೆ ಅಭಿಷೇಕ್ ಮೃತಪಟ್ಟಿದ್ದಾನೆ.
ಮದುವೆ ಸಂಭ್ರಮಕ್ಕೆ ಸಜ್ಜಾಗುತ್ತಿದ್ದ ಮನೆಯಲ್ಲಿ ಇದೀಗ ದುಃಖದ ವಾತಾವರಣ ಆವರಿಸಿದೆ. ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ನಿಶ್ಚಿತಾರ್ಥವಾಗಿದ್ದ ಯುವತಿಯ ಕುಟುಂಬದಲ್ಲೂ ಆಘಾತದ ವಾತಾವರಣ ನಿರ್ಮಾಣವಾಗಿದೆ.
ಅಭಿಷೇಕ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆ ಕುರಿತು ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ