ಬೆಂಗಳೂರು : ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ನಗರದಲ್ಲಿರುವ ಮೂವರು ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ತೆರಳಿ ಅವರನ್ನು ಸನ್ಮಾನಿಸಿ, ಗೌರವಿಸಿದ್ದಾರೆ. ಈ ವೇಳೆ ಸಚಿವರಾದ ಆರ್.ಅಶೋಕ್, ಅಶ್ವತ್ಥನಾರಾಯಣ ಜೊತೆಗಿದ್ದರು.
ಮೊದಲಿಗೆ ಜೆ.ಪಿ.ನಗರದ 4ನೇ ಹಂತದ ಆಶ್ರಯ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿರುವ ಸ್ವಾತಂತ್ರ್ಯ ಹೋರಾಟಗಾರ ಆರ್. ನಾರಾಯಣಪ್ಪ ಅವರ ಮನೆಗೆ ಭೇಟಿ ನೀಡಿದ ರಾಜ್ಯಪಾಲರು, ಅವರನ್ನು ಸಿಹಿ ತಿನ್ನಿಸಿ ಪ್ರಮಾಣ ಪತ್ರ ನೀಡಿದರು. ಬಳಿಕ ಬನಶಂಕರಿ 3ನೇ ಹಂತದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಶಂಕರನಾರಾಯಣ ರಾವ್ ಮನೆಗೆ ತೆರಳಿ ಅವರನ್ನು ಸನ್ಮಾನಿಸಿ, ಸಿಹಿ ತಿನಿಸಿದರು.
ಇದಾದ ನಂತರ ಮಲ್ಲೇಶ್ವಂರಂನಲ್ಲಿರುವ ನಾಗಭೂಷಣ್ ರಾವ್ ಮನೆಗೆ ತೆರಳಿದ ರಾಜ್ಯಪಾಲರು, ನಾಗಭೂಷಣ್ ರಾವ್ ಅವರನ್ನು ಸನ್ಮಾನಿಸಿ, ಸಿಹಿ ತಿನಿಸಿದರು. ಈ ಸಂದರ್ಭದಲ್ಲಿ ನಾಗಭೂಷಣ್ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಟಗಳಲ್ಲಿ ಭಾಗಿಯಾದ ಘಟನೆಗಳ ಬಗ್ಗೆ ವಿವರಿಸಿದರು.










