ಮೆಟ್ರೋ ಪ್ರಯಾಣ ದರ ಶೇಕಡ 43ರಷ್ಟು ಹೆಚ್ಚಿಸುವ ಸಾಧ್ಯತೆ.

34

ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಪ್ರಯಾಣ ದರ ಏರಿಕೆಯ ಬಳಿಕ ಇದೀಗ ಮೆಟ್ರೋ ಪ್ರಯಾಣ ಬೆಲೆಯನ್ನು ಹೆಚ್ಚಿಸಲಾಗುತ್ತಿದ್ದು, ಪ್ರಯಾಣಿಕರಿಗೆ ಮತ್ತೊಂದು ಹೊರೆಯಾಗಿದೆ. ಮೂಲಗಳ ಪ್ರಕಾರ ನಮ್ಮ ಮೆಟ್ರೋ ಸುಮಾರು ಶೇಕಡ 43 ರಷ್ಟು ಪ್ರಯಾಣ ದರವನ್ನು ಏರಿಕೆ ಮಾಡುವ ಸಾಧ್ಯತೆಯಿದೆ. ಜನದಟ್ಟಣೆ ಇಲ್ಲದ ಸಮಯದಲ್ಲಿ ಮೆಟ್ರೋ ಪ್ರಯಾಣದ ಟೋಕನ್ ಬಳಸುವ ಪ್ರಯಾಣಿಕರಿಗೆ ಈ ಬೆಲೆಯಲ್ಲಿ ಶೇಕಡ 5 ರಷ್ಟು ರಿಯಾಯಿತಿ ಇರಲಿದೆ. ಪ್ರಸ್ತುತ ಕನಿಷ್ಠ ಬೆಲೆ 10 ರೂಪಾಯಿ ಮತ್ತು ಗರಿಷ್ಠ ಬೆಲೆ 60 ರೂಪಾಯಿ ಆಗಿದೆ. ಟ್ರಾವೆಲ್ ಕಾರ್ಡ್ ಬಳಕೆದಾರರಿಗೆ ಅದರ ಮೇಲೆ ಶೇಕಡ 5 ರಷ್ಟು ರಿಯಾಯಿತಿ ಇದೆ. ನಿನ್ನೆ ದರ ನಿಗದಿ ಸಮಿತಿಯ ಶಿಫಾರಸುಗಳ ಬಗ್ಗೆ ಮಾತನಾಡಿದ ಬಿಎಮ್‍ಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ ಮಹೇಶ್ವರ್ ರಾವ್ ಪ್ರಯಾಣ ದರ ಪರಿಷ್ಕರಣೆಗೆ ಸಂಬಂಧಿಸಿದ ವಿವರಗಳನ್ನು ಇಂದು ಬಹಿರಂಗಗೊಳಿಲು ಮೆಟ್ರೋ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು. ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್, ಮೆಟ್ರೋ ಪ್ರಯಾಣ ಬೆಲೆಯನ್ನು ಶೇಕಡ 45 ರಷ್ಟು ಹೆಚ್ಚಳ ಮಾಡಲಾಗುವುದು ಅನಿಸುತ್ತಿದೆ ಎಂದು ಹೇಳಿದ್ದಾರೆ. ಪ್ರಯಾಣ ಬೆಲೆ ಏರಿಕೆಯನ್ನು ಮೆಟ್ರೋ ಸಮರ್ಥಿಸಿಕೊಂಡಿದೆ. 8 ವರ್ಷಗಳ ಬಳಿಕ ಮೆಟ್ರೋ ಪ್ರಯಾಣ ಬೆಲೆಯನ್ನು ಪರಿಷ್ಕರಿಸಲಾಗುತ್ತಿದೆ. ರೈಲ್ವೆ ಜಾಲ ವಿಸ್ತರಣೆಯಾಗಿದ್ದು, ಕಾರ್ಯಾಚರಣೆ ವೆಚ್ಚ ಹೆಚ್ಚಾಗಿದ್ದು, ಸಮಿತಿಯ ಶಿಫಾರಸುಗಳು ಬದ್ಧವಾಗಿವೆ. ಈ ಹಿಂದೆ ಜೂ.18, 2017 ರಂದು ಪ್ರಯಾಣ ಬೆಲೆಯನ್ನು ಶೇಕಡ 10 ರಿಂದ 15 ರಷ್ಟು ಹೆಚ್ಚಳ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.