ಮೋದಿಯವರ ನಿನ್ನೆಯ ಭಾಷಣಗಳು ಕಾಂಗ್ರೆಸ್ ಮೇಲೆ ಟೀಕೆ ಹಾಗೂ ಇನ್ನಷ್ಟು ಹೊಸ ಸುಳ್ಳು ಹೇಳುವುದಕ್ಕಷ್ಟೇ ಸೀಮಿತವಾಯಿತು : ಸಿದ್ದರಾಮಯ್ಯ

311
firstsuddi

ಬೆಂಗಳೂರು : ಮೋದಿಯವರ ನಿನ್ನೆಯ ಭಾಷಣಗಳು ಕಾಂಗ್ರೆಸ್ ಮೇಲೆ ಟೀಕೆ ಹಾಗೂ ಇನ್ನಷ್ಟು ಹೊಸ ಸುಳ್ಳು ಹೇಳುವುದಕ್ಕಷ್ಟೇ ಸೀಮಿತವಾಯಿತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಮಂತ್ರಿಗಳು ರಾಜ್ಯಕ್ಕೆ ಭೇಟಿ ನೀಡುವುದನ್ನು ಒಂದು ಜವಾಬ್ದಾರಿಯುತ ವಿರೋಧಪಕ್ಷವಾಗಿ ನಾವು ಸ್ವಾಗತಿಸುತ್ತೇವೆ. ಪ್ರಧಾನಿ ಪದವಿ ಒಂದು ಪಕ್ಷಕ್ಕೆ ಸೇರಿದ್ದಲ್ಲ, ಅವರು ದೇಶದ 130 ಕೋಟಿ ಜನರಿಗೂ ಪ್ರಧಾನಿ. ಆದರೆ ನಮಗಿದ್ದ ಈ ತಿಳುವಳಿಕೆ ಪ್ರಧಾನಿಯವರಿಗೂ ಇರಬೇಕಲ್ಲ. ಸಾಕಷ್ಟು ಗಂಭೀರ ಸಮಸ್ಯೆಗಳು ದೇಶದ ಮುಂದಿದೆ, ಜನ ಕಂಗಾಲಾಗಿದ್ದಾರೆ, ಭವಿಷ್ಯದ ಬಗ್ಗೆ ಆತಂಕಕ್ಕೀಡಾಗಿದ್ದಾರೆ. ಇದನ್ನು ಎದುರಿಸುವ ಮಾರ್ಗೋಪಾಯಗಳ ಬಗ್ಗೆ ಯೋಚನೆ ಮಾಡುವ ಬದಲಿಗೆ ಪ್ರಧಾನಿಯವರು ಪಾಕಿಸ್ಥಾನ, ಕಾಶ್ಮೀರ, ರಾಮಮಂದಿರದ ಬಗ್ಗೆ ಮಾತ್ರ ಮಾತನಾಡುತ್ತಾರೆ. ಡಾ.ಶಿವಕುಮಾರ ಸ್ವಾಮೀಜಿಯವರು ಬದುಕಿದ್ದಾಗ ಅವರಿಗೆ ಭಾರತ ರತ್ನ ನೀಡಿ ಎಂದು ಮುಖ್ಯಮಂತ್ರಿಯಾಗಿದ್ದ ನಾನು ಪತ್ರದ ಮೇಲೆ ಪತ್ರ ಬರೆದಿದ್ದೆ. ಅದಕ್ಕೆ ಪ್ರಧಾನಿ ಪ್ರತಿಕ್ರಿಯಿಸಲಿಲ್ಲ. ಈಗ ಅವರು ಲಿಂಗೈಕ್ಯರಾದ ನಂತರ ಗೌರವ ಸಲ್ಲಿಸಲು ಬಂದಿದ್ದಾರೆ. ಈಗಲಾದರೂ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ನೀಡುತ್ತೇವೆಂದು ಹೇಳಬಹುದಿತ್ತು. ಯಡಿಯೂರಪ್ಪನವರು ಯಾವುದೇ ಪಕ್ಷದಿಂದ ಆರಿಸಿಬಂದು ಮುಖ್ಯಮಂತ್ರಿಗಳಾಗಿರಬಹುದು, ಆದರೆ ಒಬ್ಬ ಮುಖ್ಯಮಂತ್ರಿಯನ್ನು ವೇದಿಕೆ ಮೇಲೆಯೇ ನಿರ್ಲಕ್ಷಿಸಿ, ಅವಮಾನಿಸಿರುವುದು ರಾಜ್ಯದ ಆರುವರೆ ಕೋಟಿ ಜನತೆಗೆ ಮಾಡಿರುವ ಅವಮಾನ ಎನ್ನವುದು ನನ್ನ ಅಭಿಪ್ರಾಯವಾಗಿದೆ. ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿರುವುದು ಅವರದ್ದೇ ಪಕ್ಷದಲ್ಲಿರುವ ಒಂದು ಗುಂಪಿಗೆ ಇಷ್ಟ ಇಲ್ಲ ಎನ್ನುವ ಮಾಧ್ಯಮ ವರದಿಗಳು ನಿಜವಿರಬಹುದು ಎಂದು ನನಗನಿಸುತ್ತಿದೆ. ಯಡಿಯೂರಪ್ಪನವರನ್ನು ದುರ್ಬಲಗೊಳಿಸಿ, ಅಸಹಾಯಕಗೊಳಿಸಿ, ಪದಚ್ಯುತಿ ಮಾಡುವ ಯೋಜನೆಯೇನಾದರೂ ಮೋದಿ-ಶಾ ಜೋಡಿಗೆ ಇರಬಹುದೇನೋ?

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರಹಳ್ಳ ಕಾವಲ್ ನಲ್ಲಿ ಎಚ್ಎಎಲ್ ಲಘು ಯುದ್ಧ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಶಂಕು ಸ್ಥಾಪನೆ ಮಾಡಿ, 2018ರಲ್ಲಿ ಮೊದಲ ಸ್ವದೇಶಿ ಹೆಲಿಕಾಪ್ಟರ್ ಹಾರಲಿದೆ ಎಂದು ಮೋದಿ ಹೇಳಿದ್ದರು. ಮೂರು ವರ್ಷ ಕಳೆದರೂ ಹೆಲಿಕಾಪ್ಟರ್ ಇನ್ನೂ ತಯಾರಾಗಿಲ್ಲ. ತುಮಕೂರಿನ ವಸಂತ ನರಸಾಪುರದಲ್ಲಿ ದೇಶದ ಮೊದಲ ಫುಡ್ ಪಾರ್ಕ್ ಅನ್ನು ನನ್ನ ಸಮ್ಮುಖದಲ್ಲಿಯೇ ಪ್ರಧಾನಿ ಮೋದಿ ಅವರು ಉದ್ಘಾಟಿಸಿ ಆರು ವರ್ಷಗಳಾಗಿವೆ. ಇದರಿಂದ ಹತ್ತು ಸಾವಿರ ನೇರ ಮತ್ತು 25 ಸಾವಿರ ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ನನ್ನ ಎದುರೇ ಭಾಷಣ ಮಾಡಿದ್ದರು. ಆದರೆ ಎಲ್ಲಿದೆ ಉದ್ಯೋಗ? ಈ ಹಿಂದೆ ತುಮಕೂರಿಗೆ ಭೇಟಿ ನೀಡಿ ಹೇಮಾವತಿ-ನೇತ್ರಾವತಿ ನದಿ ಜೋಡಣೆ ಮಾಡಿ ಎಂಟು ಜಿಲ್ಲೆಗಳಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವುದಾಗಿ ಮೋದಿಯವರು ಹೇಳಿದ್ದರು. ಅದು ಈಗ ಯಾವ ಹಂತದಲ್ಲಿದೆ? ಆ ಯೋಜನೆಗೆ ಕೇಂದ್ರ ಸರ್ಕಾರದಿಂದ ಎಷ್ಟು ದುಡ್ಡು ಕೊಟ್ಟಿದ್ದಾರೆಂದು ನಿನ್ನೆ ಮೋದಿಯವರು ತಮ್ಮ ಭಾಷಣದಲ್ಲಿ ಹೇಳಿದರೇ? ಎಂದು ಪ್ರಶ್ನಿಸಿದ್ದು, ಮಾತನಾಡಲು ಇಷ್ಟೆಲ್ಲ ಪ್ರಮುಖ ವಿಚಾರಗಳಿದ್ದು ಕೂಡ ಪ್ರಧಾನಿ ಮೋದಿಯವರ ನಿನ್ನೆಯ ಭಾಷಣಗಳು ಕಾಂಗ್ರೆಸ್ ಮೇಲೆ ಟೀಕೆ ಹಾಗೂ ಇನ್ನಷ್ಟು ಹೊಸ ಸುಳ್ಳು ಹೇಳುವುದಕ್ಕಷ್ಟೇ ಸೀಮಿತವಾಯಿತು ಎಂದರು.