ಯತ್ನಾಳ್ ಹೇಳಿಕೆಗೆ ಸಚಿವ ಮುರುಗೇಶ್ ನಿರಾಣಿ ಭಾವುಕ…

62
firstsuddi

ದಾವಣಗೆರೆ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಚಿವ ಮುರುಗೇಶ್ ನಿರಾಣಿ ನಡುವೆ ಕೆಲ ದಿನಗಳಿಂದ ವಾಕ್ಸಮರ ನಡೆಯುತ್ತಿದೆ. ಇತ್ತೀಚೆಗೆ ಶಾಸಕ ಯತ್ನಾಳ್ ಸಚಿವ ಮುರುಗೇಶ್ ನಿರಾಣಿ ಅವರನ್ನು ಪಿಂಪ್ ಸಚಿವ ಎಂದು ಹೇಳಿದ್ದರು. ಸದ್ಯ ಈ ಹೇಳಿಕೆಗೆ ಮನನೊಂದ ಸಚಿವ ಮುರುಗೇಶ್ ನಿರಾಣಿ ಭಾವುಕರಾಗಿದ್ದಾರೆ.

ದಾವಣಗೆರೆ ಜಿಎಂಐಟಿ ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳ ಮುಂದೆ ಮಾತನಾಡುತ್ತಾ ಸಚಿವರು ಭಾವುಕರಾದರು. ಬಿಜೆಪಿ ಸಂಸ್ಕೃತಿ ಹೊಂದಿರೋ ಪಕ್ಷ, ನಮ್ಮ ಸಮುದಾಯದವೂ ಸಂಸ್ಕೃತಿ ಹೊಂದಿದೆ. ಯತ್ನಾಳ್ ಅಸಂವಿಧಾನಿಕ ಮಾತುಗಳನ್ನು ಆಡುತ್ತಾರೆ. ಯತ್ನಾಳ್ ಎಲ್ಲರ ಬಗ್ಗೆ ಹಗುರವಾಗಿ ಮಾತನಾಡುತ್ತಲೇ ಇದ್ದಾರೆ. ಜೆಡಿಎಸ್ ಗೆ ಹೋಗಿ ಮುಸ್ಲಿಂ ಟೋಪಿ ಹಾಕಿದ್ದು ಎಲ್ಲರಿಗೂ ಗೊತ್ತಿದೆ. ಯತ್ನಾಳ್ ಡೋಂಗಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸಿದ್ದೇಶ್ವರ ಸ್ವಾಮೀಜಿ ಅವರ ಸನ್ನಿಧಿಯಲ್ಲಿ ಬೆಳೆದವರು ನಾವು. ನಾನು ಘಟಪ್ರಭಾ, ಮಲಪ್ರಭಾ ನೀರು ಕುಡಿದವನು. ದೀಪ ಆರುವಾಗ ಗಾಳಿ ಜೋರಾಗಿ ಇರುತ್ತಂತೆ. ಯತ್ನಾಳ್ ಪರಿಸ್ಥಿತಿ ಕೂಡ ಹಾಗೆ ಆಗಿದೆ. ಯತ್ನಾಳ್ ಗೆ ಪಕ್ಷದಲ್ಲಿ ಇರೋದು ಇಷ್ಟ ಇಲ್ಲದೇ ಇದ್ದರೆ ಪಕ್ಷ ಬಿಟ್ಟು ಹೋಗ್ಲಿ ಎಂದು ವಾಗ್ದಾಳಿ ನಡೆಸಿದರು.

ಜಯಮೃತ್ಯುಂಜಯ ಸ್ವಾಮೀಜಿ ಮೀಸಲಾತಿ ವಿಚಾರದಲ್ಲಿ ರಾಜಕೀಯ ಮಾಡ್ತಿದ್ದಾರೆ. ಯಡಿಯೂರಪ್ಪ ಸರ್ಕಾರ ಇದ್ದಾಗ 3ಬಿ ಗೆ ಸೇರಿಸುವ ಕೆಲಸ ಮಾಡಿದ್ದರು. 2013-18 ರ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಆಗ ಕಾಂತರಾಜ್ ವರದಿಯನ್ನು ಸರ್ಕಾರ ನಿರಾಕರಿಸಿತ್ತು. ಕಾಂಗ್ರೆಸ್ ಸರ್ಕಾರದಲ್ಲಿ ಸುಮ್ಮನಿದ್ದ ಸ್ವಾಮೀಜಿ ಈಗ ಹೋರಾಟ ಮಾಡ್ತಿದ್ದಾರೆ. ಅವರ ಅವಧಿಯಲ್ಲಿ ಮಾತನಾಡದವರು ಈಗ ಮಾತನಾಡುತ್ತಿದ್ದಾರೆ ಎಂದರು.