ರಮೇಶ್ ಜಾರಕಿಹೊಳಿ ಅತ್ಯಾಪ್ತ ಪೃಥ್ವಿ ಸಿಂಗ್ ಗೆ ಚಾಕು ಇರಿತ- ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರನ ಮೇಲೆ ಗಂಭೀರ ಆರೋಪ…

46
firstsuddi

ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರಮಾಪ್ತರಾಗಿರುವ ಬಿಜೆಪಿ ರಾಜ್ಯಕಾರ್ಯಕಾರಣಿ ಸದಸ್ಯ ಪೃಥ್ವಿ ಸಿಂಗ್ ಮೇಲೆ, ಎಂಎಲ್‌ಸಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳ್ಳಿ ಆಪ್ತರು ಈ ಮಾರಣಾಂತಿಕ ಹಲ್ಲೆ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ.

ಸದ್ದಾಂ, ಸುಜಯ್ ಜಾಧವ್ ಮತ್ತು ಚನ್ನರಾಜ್ ಅವರು ಪೃಥ್ವಿ ಸಿಂಗ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಬಂದಿದೆ. ಪೃಥ್ವಿ ಸಿಂಗ್ ಮನೆಗೆ ಏಕಾಏಕಿ ಬಂದ ಆರೋಪಿಗಳು ಕೆಲಹೊತ್ತು ಮಾತಿನ ಚಕಮಕಿ ನಡೆಸಿದ್ದಾರೆ. ಬಳಿಕ ನೇರವಾಗಿ ಚಾಕುವಿನಿಂದ ಹಲ್ಲೆಗೆ ಮುಂದಾಗಿರುವ ಆರೋಪ ಕೇಳಿಬಂದಿದೆ. ಸದ್ಯ ಪೃಥ್ವಿ ಸಿಂಗ್‌ಗೆ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಸುದ್ದಿ ತಿಳಿದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕ ಸಂಜಯ್ ಪಾಟೀಲ್ ಸೇರಿದಂತೆ ಹಲವು ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಪೃಥ್ವಿ ಸಿಂಗ್ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾತನಾಡಿದ ಬಿವೈ ವಿಜಯೇಂದ್ರ ಸಿಎಂ, ಡಿಸಿಎಂ ಗೃಹ ಸಚಿವರು ಬೆಳಗಾವಿಯಲ್ಲಿ ಇರುವಾಗಲೇ ಈ ರೀತಿ ಘಟನೆ ನಡೆದಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೆವೆ. ಘಟನೆ ನಡೆಯುವಾಗ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಹಾಗೂ ಎಂಎಲ್‌ಸಿ ಚನ್ನರಾಜ್ ಸ್ಥಳದಲ್ಲಿ ಇರುವ ಮಾಹಿತಿಯಿದೆ. ಶೀಘ್ರದಲ್ಲೇ ಆರೋಪಿಗಳ ಬಂಧನವಾಗಬೇಕು ಇಲ್ಲದಿದ್ದರೆ ಬಿಜೆಪಿ ಕಾರ್ಯಕರ್ತರು ರಸ್ತೆಗಿಳಿಯುತ್ತಾರೆ ಎಂದು ಎಚ್ಚರಿಕೆ ನೀಡಿದರು.