ರಾಜಕೀಯ ನಿವೃತ್ತಿ ಸುಳಿವು ನೀಡಿದ್ರಾ ಡಿ.ಕೆ.ಶಿವಕುಮಾರ್?

56
firstsuddi

ರಾಮನಗರ : ನಾನು ಇನ್ನು 8-10 ವರ್ಷ ಮಾತ್ರ ರಾಜಕಾರಣ ಮಾಡಬಹುದು. ಆ ನಂತರ ರಾಜಕೀಯ ಮಾಡಲು ಆಗಲ್ಲ ಎಂದು ರಾಜಕೀಯ ನಿವೃತ್ತಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸುಳಿವು ನೀಡಿದ್ದಾರೆ.

ಆಯುಧ ಪೂಜೆ ದಿನ ಕನಕಪುರದ ತಮ್ಮ ನಿವಾಸದಲ್ಲಿ ಶಿಕ್ಷಣ ಸಂಸ್ಥೆಯ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿರುವ ವೀಡಿಯೋ ವೈರಲ್ ಆಗಿದೆ. ನನಗೆ ನೀವು ಕೊಟ್ಟಿರುವ ಪೊಷಿಷನ್ ಸಾಕು, ಇನ್ಯಾವ ಪೊಷಿಷನ್ ಬೇಡ. ನನಗೆ ಇದೀಗ 60 ವರ್ಷ ತುಂಬಿದೆ. ನಾನು ರಾಜಕೀಯ ನಿವೃತ್ತಿ ಪಡೆಯುವುದರ ಒಳಗಾಗಿ ಈ ಶಿಕ್ಷಣ ಸಂಸ್ಥೆಯಲ್ಲಿ ಏನಾದರೂ ಬದಲಾವಣೆ ತರಬೇಕು ಎಂದು ಹೇಳಿದ್ದಾರೆ.

ನಾನು ನಿಮ್ಮಿಂದ ಯಾವುದೇ ಪ್ರತಿಫಲ ನಿರೀಕ್ಷೆ ಮಾಡುವವನಲ್ಲ. ನಾನು ಸಾಕಷ್ಟು ಸಂಪಾದನೆ ಮಾಡಿದ್ದೇನೆ. ನನ್ನ ಮೇಲೆ ಸಾಕಷ್ಟು ಕೇಸ್ ಗಳು ಸಹ ಇವೆ. ಎಲ್ಲವನ್ನು ಅನುಭವಿಸುತ್ತೇನೆ. ಕನಕಪುರ ಕ್ಷೇತ್ರದ ಜನರು ನನಗೆ ಮತ ನೀಡಿ, ಶಾಸಕನನ್ನಾಗಿ ಮಾಡಿದ್ದಾರೆ. ಈ ತಾಲೂಕಿನಲ್ಲಿ ಯಾವುದಕ್ಕೂ, ಯಾರ ಮುಂದೆಯೂ ಕೈ ಚಾಚಿಲ್ಲ. ಕಮಿಷನ್ ಪಡೆದಿಲ್ಲ. ಜಾತಿಗಿಂತ ನೀತಿ ಮೇಲೆ ನನಗೆ ನಂಬಿಕೆ ಇದೆ ಎಂದಿದ್ದಾರೆ.

ಇಡಿ ವಿಚಾರಣೆ:
ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಡಿ.ಕೆ ಸುರೇಶ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಯಂಗ್​ ಇಂಡಿಯಾ ಹಣಕಾಸು ವ್ಯವಹಾರದ ಬಗ್ಗೆ ಇಡಿ ಅಧಿಕಾರಿಗಳು ಸಹೋದರರನ್ನು ಇಂದು ಪ್ರತ್ಯೇಕವಾಗಿ ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

ಇಬ್ಬರನ್ನು ಪ್ರತ್ಯೇಕ ವಿಚಾರಣೆ ನಡೆಸಿದ ಅಧಿಕಾರಿಗಳು ಯಂಗ್ ಇಂಡಿಯಾಗೆ ನೀಡಿದ ದೇಣಿಗೆಯ ಮೂಲವನ್ನು ಪ್ರಶ್ನಿಸಿದ್ದಾರೆ. ಕಳೆದ ಎಪ್ರಿಲ್ ನಲ್ಲಿ ಡಿ.ಕೆ ಸುರೇಶ್ 25 ಲಕ್ಷ ರೂ. ದೇಣಿಗೆ ನೀಡಿದ್ದು, ಡಿ.ಕೆ ಶಿವಕುಮಾರ್ ಆಗಾಗ ದೇಣಿಗೆ ನೀಡಿರುವುದು ತಿಳಿದುಬಂದಿದೆ. ದೇಣಿಗೆಯ ಉದ್ದೇಶ ಮತ್ತು ಕಾರಣಗಳನ್ನು ವಿವರಿಸಿರುವ ಡಿ.ಕೆ ಸಹೋದರರು, ದೇಣಿಗೆ ನೀಡಿದ ಹಣದ ಮೂಲದ ಬಗ್ಗೆ ಮಾಹಿತಿ ನೀಡಲು ಕಾಲಾವಕಾಶ ಕೇಳಿದ್ದಾರೆ ಎಂಬುದು ತಿಳಿದು ಬಂದಿದೆ.