ಬೆಂಗಳೂರು : ಆ್ಯಪ್ ಮೂಲಕ ಆಟೋರಿಕ್ಷಾ ಸೇವೆಗಳನ್ನು ನೀಡುತ್ತಿರುವ ಓಲಾ, ಉಬರ್ ಸಂಸ್ಥೆಗಳಿಗೆ ಸಾರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ತಮ್ಮ ಸೇವೆಗಳನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ಸೂಚನೆ ನೀಡಿದೆ.
ಬೆಂಗಳೂರು ನಗರದಲ್ಲಿ ಆಟೋ ಸಂಚಾರಕ್ಕೆ ಕನಿಷ್ಟ ದರ 30 ರೂ. ನಿಗದಿಪಡಿಸಲಾಗಿದ್ದರೂ ಆ್ಯಪ್ ಆಧಾರಿತ ಅಗ್ರಿಗೆಟರ್ ಗಳು ಕನಿಷ್ಠ ದರವಾಗಿ 100 ರೂಪಾಯಿಯನ್ನು ಪ್ರಯಾಣಿಕರಿಂದ ವಸೂಲು ಮಾಡುತ್ತಿರುವುದಕ್ಕೆ ಸಾರಿಗೆ ಇಲಾಖೆ ಆಕ್ಷೇಪ ವ್ಯಕ್ತಪಡಿಸಿ ಓಲಾ, ಉಬರ್ ಟ್ಯಾಕ್ಸಿ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ. ಹೆಚ್ಚಿನ ದರವನ್ನು ವಸೂಲು ಮಾಡುತ್ತ ಕಾನೂನು ಬಾಹಿರವಾಗಿ ಆಟೋರಿಕ್ಷಾ ಸೇವೆ ಒದಗಿಸುತ್ತಿರುವ ಬಗ್ಗೆ 3 ದಿನಗಳಲ್ಲಿ ಸಾರಿಗೆ ಇಲಾಖೆಗೆ ವಿವರ ನೀಡುವಂತೆ ನೋಟಿಸ್ ನಲ್ಲಿ ಸೂಚಿಸಲಾಗಿದೆ.
ನಿಬಂಧನೆಗಳ ಪ್ರಕಾರ, ಈ ಕಂಪನಿಗಳಿಗೆ ಟ್ಯಾಕ್ಸಿ ಸೇವೆ ಒದಗಿಸಲು ಮಾತ್ರ ಲೈಸೆನ್ಸ್ ನಲ್ಲಿ ಅವಕಾಶ ನೀಡಲಾಗಿದೆ. ಆದರೆ ಕಂಪನಿಗಳು ಆಟೋ ಸಂಚಾರಕ್ಕೆ ಸಾರಿಗೆ ಇಲಾಖೆಯಿಂದ ಪರವಾನಗಿ ಪಡೆಯದೇ ಆಟೋ ಸಂಚಾರ ಸೇವೆ ಒದಗಿಸುತ್ತಿರುವುದು ಕಾನೂನುಬಾಹಿರವಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಕಂಪನಿಗಳು ತಮ್ಮ ಆಟೋ ಸೇವೆಗಳನ್ನು ಆದಷ್ಟು ಬೇಗ ನಿಲ್ಲಿಸಬೇಕು. ಹಾಗೂ ಟ್ಯಾಕ್ಸಿಗಳಲ್ಲಿಯೂ ಪ್ರಯಾಣಿಕರಿಗೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಶುಲ್ಕವನ್ನು ವಿಧಿಸಬಾರದು ಎಂದು ಇಲಾಖೆ ಸೂಚನೆ ನೀಡಿದೆ. ಆದೇಶ ಪಾಲಿಸಲು ವಿಫಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಇಲಾಖೆ ಎಚ್ಚರಿಸಿದೆ.










