ಬೆಂಗಳುರು : ರಾಜ್ಯದಲ್ಲಿ ಡೆಡ್ಲಿ ಕೊರೊನಾ ವೈರಸ್ಗೆ ಮತ್ತೊಂದು ಬಲಿಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಅಲ್ಲದೇ ಇಂದು ಒಂದೇ ದಿನ ರಾಜ್ಯದಲ್ಲಿ 17 ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 277ಕ್ಕೆ ಏರಿಕೆಯಾಗಿದೆ. ಮೈಸೂರು ಜಿಲ್ಲೆ ಒಂದರಲ್ಲೇ 10 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಬಾಗಲಕೋಟೆ-2, ಬೆಂಗಳೂರು-2, ವಿಜಯಪುರದಲ್ಲಿ 2 ಪ್ರಕರಣಗಳು ಪತ್ತೆಯಾಗಿದೆ. ಅಲ್ಲದೇ ಚಿಕ್ಕಬಳ್ಳಾಪುರದ 65 ವರ್ಷದ ವೃದ್ಧ ಸೋಂಕಿಗೆ ಬಲಿಯಾಗಿದ್ದಾರೆ. ಮೃತ ವೃದ್ಧನಿಗೆ ಈ ಮೊದಲೇ ಅಸ್ತಮಾ, ಸಕ್ಕರೆ ಖಾಯಿಲೆ ಹಾಗೂ ಬಿಪಿಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆ, ವೃದ್ಧನನ್ನು ಏಪ್ರಿಲ್ 8ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವೃದ್ಧನ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ನಿನ್ನೆಯಷ್ಟೇ ವೃದ್ಧನಿಗೆ ಸೋಂಕು ತಗುಲಿರುವುದು ದೃಢವಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ವೃದ್ಧ ಮೃತಪಟ್ಟಿದ್ದು, ಮೃತ ವೃದ್ಧನಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿರುವುದರಿಂದ ಸೋಂಕು ಹೇಗೆ ತಗುಲಿದೆ ಎಂಬುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.










