ಬೆಳಗಾವಿ : ರಾಜ್ಯದಲ್ಲಿ ದೀಪಾವಳಿ ಹಬ್ಬದ ವೇಳೆ ಪಟಾಕಿ ನಿಷೇಧಿಸುವುದು ಸರಿಯಲ್ಲ ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಹೇಳಿದ್ದಾರೆ. ಹುಕ್ಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪಟಾಕಿಯಿಂದ ಮಾತ್ರ ಪರಿಸರ ಮಾಲಿನ್ಯವಾಗುತ್ತಿದೆ ಎಂಬುವುದು ಸುಳ್ಳು. ಇಂದು ವಾಹನಗಳಿಂದಲೂ ಪರಿಸರ ಮಾಲಿನ್ಯ ಆಗುತ್ತಿದೆ. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಈಗಾ ಕಾನೂನು ಜಾರಿಗೆ ತರಲು ಮುಂದಾಗಿರುವವರು ಅರಣ್ಯ ಪ್ರದೇಶಗಳತ್ತ ಒಮ್ಮೆ ಭೇಟಿ ನೀಡಬೇಕು. ಏಕೆಂದರೆ ಅಭಿವೃದ್ಧಿಯ ಹೆಸರಿನಲ್ಲಿ ನೀವು ಎಷ್ಟು ಪರಿಸರ ನಾಶ ಮಾಡುತ್ತಿದ್ದೀರಾ ಎಂಬುವುದು ನಿಮಗೆ ತಿಳಿಯುತ್ತದೆ. ಆದರೆ ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬದ ವೇಳೆ ಪಟಾಕಿ ನಿಷೇಧಿಸುವುದು ಎಷ್ಟರ ಮಟ್ಟಿಗೆ ಸರಿ. ದೀಪಾವಳಿ ಹಬ್ಬದ ವೇಳೆ ಧಾರ್ಮಿಕ ವಿಧಿ ವಿಧಾನದಿಂದ ಆಚರಣೆಗಳು ನಡೆಯುವುದರಿಂದ ಪಟಾಕಿಯನ್ನು ನಿಷೇಧಿಸಬಾರದು ಎಂದು ಆಗ್ರಹಿಸಿದರು.










