ಬೆಂಗಳೂರು : ನಗರದಲ್ಲಿ ಇಂದು ಬಂಟರ ಸಂಘವು ಹೋಮ್ ಐಸೋಲೇಷನ್ ಆಗಿರುವ ಕೋವಿಡ್ ಸೋಂಕಿತರಿಗಾಗಿ ವ್ಯವಸ್ಥೆ ಮಾಡಿರುವ 20 ಆಮ್ಲಜನಕ ಸಾಂದ್ರಕಗಳ ವ್ಯವಸ್ಥೆಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರು, ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು, ಬ್ಲ್ಯಾಕ್ ಫಂಗಸ್ ಕಾಯಿಲೆಗೆ ಬಳಸಲಾಗುವ ಔಷಧಿಗೆ ಕೊರತೆ ಇಲ್ಲ. ಈಗಾಗಲೇ ಕೇಂದ್ರದಿಂದ 1,000 ವೈಲ್ಸ್ ಬಂದಿದೆ. ಈ ಔಷಧಿಯ ಕೊರತೆಯನ್ನು ನೀಗಿಸಲು ಸರ್ಕಾರ ಎಲ್ಲಾ ಪ್ರಯತ್ನವನ್ನು ಮಾಡುತ್ತಿದೆ. ನಗರದ ಬೌರಿಂಗ್ ಆಸ್ಪತ್ರೆ ಸೇರಿದಂತೆ ರಾಜ್ಯದ ಆರು ಕಡೆಗಳಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲಿಯೂ ಔಷಧಿ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತಿದ್ದು, ಕೇಂದ್ರದಿಂದ ಇನ್ನೂ ಹೆಚ್ಚಿನ ಔಷಧಿ ಪಡೆಯಲು ಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಕಾರ್ಯದರ್ಶಿ ಮಧುಕರ ಶೆಟ್ಟಿ, ಉಮೇಶ ಶೆಟ್ಟಿ, ಸಂಘದ ವೈದ್ಯಕೀಯ ವಿಭಾಗದ ಅಧ್ಯಕ್ಷ ಡಾ. ನಿಶಾಕಾಂತ್ ಶೆಟ್ಟಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.










