ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿನ ಅನೇಕ ವೈದ್ಯಕೀಯ ಕಾಲೇಜುಗಳಲ್ಲಿ ಮೂಲಸೌಕರ್ಯಗಳ ಸಮಸ್ಯೆ ಇರುವುದು ಮತ್ತೆ ತಿಳಿದುಬಂದಿದೆ. ಉತ್ತಮ ಸೌಲಭ್ಯ ಒದಗಿಸದ, ಕಳಪೆ ಉಪಕರಣಗಳು, ಸಿಬ್ಬಂದಿ ಕೊರತೆ ಇರುವ, ರೋಗಿಗಳ ದತ್ತಾಂಶಗಳನ್ನು ಸರಿಯಾಗಿ ನಿರ್ವಹಿಸದ ರಾಜ್ಯದ 27 ವೈದ್ಯಕೀಯ ಕಾಲೇಜುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಈ ಹಿಂದೆ ದಂಡ ವಿಧಿಸಿತ್ತು. ಇದಿಗ ಮತ್ತೆ ರಾಜ್ಯದ ಮೆಡಿಕಲ್ ಕಾಲೇಜುಗಳಿಗೆ ಚಾಟಿ ಬೀಸಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮುಂದಾಗಿದೆ. ಮೂಲಭೂತ ಸೌಕರ್ಯಕೊರತೆ ಹಾಗೂ ಸರಿಯಾದ ಸೇವೆ ನೀಡದೆ ಕಳ್ಳಾಟವಾಡುತ್ತಿರುವ ಮೆಡಿಕಲ್ ಕಾಲೇಜುಗಳ ವಿರುದ್ಧ ಮತ್ತೆ ಎನ್‍ಎಂಸಿಗೆ ವರದಿ ನೀಡಲು ಆರೋಗ್ಯ ವಿಶ್ವವಿದ್ಯಾಲಯ ಮುಂದಾಗಿದೆ. ಈ ಹಿಂದೆ ರಾಷ್ಟ್ರೀಯ ವೈದ್ಯಕೀಯ ಆಯೋಗ ರಾಜ್ಯದ 27 ಮೆಡಿಕಲ್ ಕಾಲೇಜಿಗೆ ನೋಟಿಸ್ ನೀಡಿ ದಂಡ ವಿಧಿಸಲಾಗಿತ್ತು. ಆ ನಂತರ ಕೂಡ ಹಲವು ಮೆಡಿಕಲ್ ಕಾಲೇಜಿಗಳು ಮತ್ತೆ ಕಳ್ಳಾಟವಾಡುತ್ತಿವೆ. ಸಾಕಷ್ಟು ಮೆಡಿಕಲ್ ಕಾಲೇಜುಗಳಲ್ಲಿ ಸಿಬ್ಬಂದಿ ಕೊರತೆ, ಮೂಲಭೂತ ಸೌಕರ್ಯಗಳ ಕೊರತೆ ಇದೆ. ಜತೆಗೆ ರೋಗಿಗಳಿಗೆ ಸರಿಯಾದ ಚಿಕಿತ್ಸೆಯನ್ನೂ ನೀಡುತ್ತಿಲ್ಲ ಎಂಬ ಆರೋಪಗಳಿವೆ. ಹೀಗಾಗಿ ಇತಂಹ ಕಾಲೇಜುಗಳ ಮಾಹಿತಿ ಪಡೆಯಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮುಂದಾಗಿದೆ.










