ರಾಜ್ಯಪ್ರಶಸ್ತಿ ಪುರಸ್ಕೃತ, ಪರಿಸರ ಪ್ರೇಮಿ ವೀರಾಚಾರಿ ಆತ್ಮಹತ್ಯೆ…

89
firstsuddi

ದಾವಣಗೆರೆ : ರಾಜ್ಯ ಪ್ರಶಸ್ತಿ ವಿಜೇತ, ಪರಿಸರ ಪ್ರೇಮಿ, ಸಾಲು ಮರದ ಮಿಟ್ಲಕಟ್ಟೆ ವೀರಾಚಾರಿ ಅವರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾಲೂಕಿನ ಮಿಟ್ಲಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. 3,000ಕ್ಕೂ ಹೆಚ್ಚು ಮರಗಳನ್ನು ಬೆಳೆಸಿ ದಾವಣಗೆರೆ ಜಿಲ್ಲೆಗೆ ವೀರಾಚಾರಿ ಚಿರಪರಿಚಿತರಾಗಿದ್ದರು. ಸಾಲು ಮರಗಳನ್ನು ಬೆಳೆಸಿ ಪೋಷಿಸಿದ್ದ ಪರಿಸರ ಪ್ರೇಮಿಗೆ ಈ ಹಿಂದೆ ರಾಜ್ಯ ಸರ್ಕಾರ ರಾಜೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

ಇತ್ತೀಚೆಗೆ ಇವರು ಮಿಟ್ಲಕಟ್ಟೆ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಬಡವರಿಗೆ ಸೂಕ್ತವಾಗಿ ಅಕ್ಕಿ ವಿತರಣೆಯಾಗುತ್ತಿಲ್ಲ ಎಂದು ನ್ಯಾಯಬೆಲೆ ಅಕ್ರಮದ ವಿರುದ್ಧ ವೀರಾಚಾರಿ ಅವರು ಹೋರಾಟ ನಡೆಸುತ್ತಿದ್ದರು. ಈ ಹಿಂದೆ ವೀರಾಚಾರಿ ನ್ಯಾಯಾಲಯ, ಜನರು ಮತ್ತು ದೇವರಲ್ಲಿಯೂ ನ್ಯಾಯ ಸಿಗದಿದ್ದರೆ ನೇಣಿಗೆ ಶರಣಾಗುವೆ ಎಂದು ಹೇಳಿದ್ದರು. ಅದರಂತೆಯೇ ನಿನ್ನೆ ರಾತ್ರಿ 2 ಗಂಟೆಗೆ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ವೀರಾಚಾರಿ ಸಾವಿನ ಹಿನ್ನೆಲೆ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮದ ರಸ್ತೆ ಬಂದ್ ಮಾಡಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವಂತೆ ಆಗ್ರಹಿಸಿದ್ದಾರೆ.