ರಾಮಲಲ್ಲಾ ಮೂರ್ತಿ ಇನ್ನೂ ಅಂತಿಮವಾಗಿಲ್ಲ: ಪೇಜಾವರ ಶ್ರೀ.

65
firstsuddi

ಉಡುಪಿ: ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗುವ ರಾಮಲಲ್ಲಾನ ಮೂರ್ತಿಯ ಆಯ್ಕೆ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. ವಿಗ್ರಹ ಆಯ್ಕೆ ಬಗ್ಗೆ ಜನವರಿ 17ರಂದು ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿಯೂ ಆಗಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ತಿಳಿಸಿದ್ದಾರೆ.

ಈ ಕುರಿತು ಉಡುಪಿಯಲ್ಲಿ ಮಾತನಾಡಿದ ಅವರು, ಎರಡು ಕಪ್ಪು ಕಲ್ಲುಗಳು ಮತ್ತು ಒಂದು ಅಮೃತ ಶಿಲೆಯಲ್ಲಿ ರಾಮಲಲ್ಲಾ ವಿಗ್ರಹವನ್ನು ಸುಂದರವಾಗಿ ಕೆತ್ತಲಾಗಿದೆ. ಟ್ರಸ್ಟ್‌ನ ಎಲ್ಲಾ ಸದಸ್ಯರು ಮತ ಚಲಾಯಿಸಿದ್ದಾರೆ. ಪ್ರಾಣ ಪ್ರತಿಷ್ಠೆಗೆ ಮೊದಲು ಜ.17ರಂದು ಬಾಲರಾಮನ ವಿಗ್ರಹವನ್ನು ಮೆರವಣಿಗೆಯಲ್ಲಿ ಸರಯೂ ನದಿಗೆ ತೆಗೆದುಕೊಂಡು ಹೋಗಿ ಜಲಾಭಿಷೇಕ ನಡೆಸಲಾಗುತ್ತದೆ, ಅಂದು ಈಗಾಗಲೇ ತಯಾರಾಗಿರುವ 3 ವಿಗ್ರಹಗಳಲ್ಲಿ ಅದು ಯಾವ ವಿಗ್ರಹ ಎಂದು ಬಹಿರಂಗ ಆಗುತ್ತದೆ ಎಂದು ಹೇಳಿದ್ದಾರೆ.

ದೇವಾಲಯದ ಉದ್ಘಾಟನೆಗೆ ಆಹ್ವಾನಿತರನ್ನು ಪ್ರಾತಿನಿಧ್ಯದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ದೇವಸ್ಥಾನದಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ ಎಲ್ಲರೂ ಭಾಗವಹಿಸುವಂತಿಲ್ಲ. ಮೂರ್ತಿ ಪ್ರತಿಷ್ಠಾಪನೆ ನಂತರ ಎಲ್ಲ ಭಕ್ತರು ದರ್ಶನ ಪಡೆಯಬಹುದು ಎಂದು ತಿಳಿಸಿದರು.

ಬಿಜೆಪಿ ಸರ್ಕಾರದಿಂದ ದೇಣಿಗೆ ಪಡೆದು ದೇವಾಲಯ ನಿರ್ಮಿಸಿಲ್ಲ, ಭಕ್ತರಿಂದ ದೇಣಿಗೆ ಸಂಗ್ರಹಿಸಿ ಇದನ್ನು ನಿರ್ಮಿಸಲಾಗಿದೆ. ಇದು ಬಿಜೆಪಿಯ ರಾಮಮಂದಿರವಲ್ಲ, ದೇವರು ಬರೀ ದೇವಸ್ಥಾನಕ್ಕೆ ಸೀಮಿತವಾಗಿಲ್ಲ, ಎಲ್ಲರಲ್ಲಿಯೂ ನೆಲೆಸಿದ್ದಾನೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿಯೂ ದೇವರು ಇದ್ದಾನೆ ಎಂದು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಹಳೆ ಪ್ರಕರಣದಲ್ಲಿ ಕರಸೇವಕರನ್ನು ಬಂಧಿಸಿರುವುದು ಸರಿಯಲ್ಲ, ಹಿಂದೂಗಳನ್ನು ಹತ್ತಿಕ್ಕಲು ಸರ್ಕಾರ ಹವಣಿಸುತ್ತಿರುವಂತೆ ತೋರುತ್ತಿದೆ, ರಾಮಮಂದಿರ ಉದ್ಘಾಟನೆಗೆ ಸಜ್ಜಾಗಿರುವಾಗ ಇಂತಹ ಘಟನೆಗಳು ನಡೆಯಬಾರದು. ಯಾವುದೇ ಗೊಂದಲಗಳಿಗೆ ಸರ್ಕಾರ ಆಸ್ಪದ ನೀಡಬಾರದು ಎಂದು ಅವರು ಸಲಹೆ ನೀಡಿದರು.

ದೇಶದ ಬಹುಸಂಖ್ಯಾತ ಹಿಂದೂಗಳ ಭಾವನೆಗಳನ್ನು ಪರಿಗಣಿಸಿ ರಾಮಮಂದಿರ ಉದ್ಘಾಟನೆಯ ದಿನದಂದು ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ.