ತಿರುವನಂತಪುರಂ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ರಾಮ ನಾಮ ಜಪಿಸುವಂತೆ ಕರೆ ನೀಡಿದ್ದ ಖ್ಯಾತ ಹಿನ್ನೆಲೆ ಗಾಯಕಿ, ರಾಷ್ಟ್ರ ಪ್ರಶಸ್ತಿ ವಿಜೇತರು ಕೆ.ಎಸ್. ಚಿತ್ರಾ ಅವರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಪರ ಮತ್ತು ವಿರೋಧದ ಚರ್ಚೆ ಶುರುವಾಗಿದೆ.
ಗಾಯಕಿ ಚಿತ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪುಟ್ಟದೊಂದು ವೀಡಿಯೋ ಅಪ್‌ಡೇಟ್ ಮಾಡಿದ್ದರು. ಈ ವೀಡಿಯೋದಲ್ಲಿ ಚಿತ್ರಾ ಅವರು ಜನವರಿ 22ರಂದು ಮಧ್ಯಾಹ್ನ 12:20ಕ್ಕೆ ಎಲ್ಲರೂ ಶ್ರೀರಾಮ, ಜಯ ರಾಮ, ಜಯ ಜಯ ರಾಮ ಎಂಬ ಮಂತ್ರವನ್ನು ಭಜನೆ ಮಾಡುವಂತೆ ಮನವಿ ಮಾಡಿದ್ದರು.
ಅಯೋಧ್ಯೆಯ ಶ್ರೀರಾಮ ಮಂದಿರದ ಗರ್ಭ ಗೃಹದಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಆಗುವ ಹೊತ್ತಲ್ಲಿ ಎಲ್ಲರೂ ರಾಮ ನಾಮ ಭಜಿಸಿ ಧ್ಯಾನ ಮಾಡುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗುವಂತೆ ಕೋರಿದ್ದರು. ಜೊತೆಗೆ 5 ದೀಪಗಳನ್ನು ಹಚ್ಚಿಡಬೇಕು ಎಂದು ಗಾಯಕಿ ಚಿತ್ರಾ ಅವರು ಕರೆ ನೀಡಿದ್ದರು. ಈ ವೀಡಿಯೋ ಇದೀಗ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ.
ಈ ವೀಡಿಯೋ ಅಪ್‌ಲೋಡ್ ಆದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಗಾಯಕಿ ಚಿತ್ರಾ ವಿರುದ್ಧ ಕೆಲವರು ಟೀಕೆ ಮಾಡಿದ್ದಾರೆ. ನೀವು ರಾಜಕೀಯವಾಗಿ ಯಾರ ಪರ ಎಂದೆಲ್ಲಾ ಗಾಯಕಿ ಚಿತ್ರಾ ಅವರನ್ನು ದೂರಿದ್ದರೆ, ಇನ್ನ ಕೆಲವರು ಅವರಿಗೆ ತಮ್ಮ ನಿಲುವನ್ನು ಮಂಡಿಸುವ ಹಕ್ಕಿದೆ ಎಂದು ಚಿತ್ರಾ ಪರ ನಿಂತಿದ್ದಾರೆ.










