ಟ್ರ್ಯಾಕ್ಟರ್‌ಗೆ ಓಮಿನಿ ವ್ಯಾನ್ ಡಿಕ್ಕಿ- ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಸಾವು…

40
firstsuddi

ದಾವಣಗೆರೆ: ಭತ್ತದ ಹುಲ್ಲು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‌ಗೆ ಓಮಿನಿ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗುಳ್ಳೇನಹಳ್ಳಿ ಬಳಿಯ ಬೀರೂರು-ಸಮ್ಮಸ್ ರಸ್ತೆಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ಮೃತರನ್ನು ರುದ್ರೇಶಪ್ಪ (64), ಮಲ್ಲಿಕಾರ್ಜುನ್ (62) ಹಾಗೂ ಗಂಗಮ್ಮ (80) ಎಂದು ಗುರುತಿಸಲಾಗಿದೆ. ಇನ್ನೂ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನು ಚನ್ನಗಿರಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರು ಹಾಗೂ ಗಾಯಾಳುಗಳು ಚನ್ನಗಿರಿ ತಾಲೂಕಿನ ನಾರಶೆಟ್ಟಿಹಳ್ಳಿ ಗ್ರಾಮದ ನಿವಾಸಿಗಳಾಗಿದ್ದು, ಸಂತೆಬೆನ್ನೂರು ಕಡೆಯಿಂದ ಚನ್ನಗಿರಿಗೆ ಓಮಿನಿಯಲ್ಲಿ ಒಂದೇ ಕುಟುಂಬಸ್ಥರು ತೆರಳುತ್ತಿದ್ದರು. ಈ ವೇಳೆ ಎದುರಿಗೆ ಭತ್ತದ ಹುಲ್ಲು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದ್ದಾರೆ. ಹೊಡೆತದ ರಭಸಕ್ಕೆ ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ಘಟನಾ ಸ್ಥಳಕ್ಕೆ ಚನ್ನಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.