ರೈಲಿನಲ್ಲಿ ಮಹಿಳಾ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಎನ್‌ಕೌಂಟರ್‌ನಲ್ಲಿ ಸಾವು…

59
firstsuddi

ಲಕ್ನೋ: ಕಳೆದ ತಿಂಗಳು ರೈಲಿನಲ್ಲಿ ಮಹಿಳಾ ಕಾನ್‌ಸ್ಟೆಬಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪಿಯನ್ನು ಉತ್ತರ ಪ್ರದೇಶದಲ್ಲಿ ಪತ್ತೆ ಹಚ್ಚಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ತಿಂಗಳು ಅಯೋಧ್ಯೆಯ ಬಳಿ ಸರಯು ಎಕ್ಸ್‌ಪ್ರೆಸ್‌ನಲ್ಲಿ ರಕ್ತದ ಮಡುವಿನಲ್ಲಿ ಕಾನ್‌ಸ್ಟೆಬಲ್ ಮುಖ ಮತ್ತು ತಲೆಗೆ ಗಾಯಗಳಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರು ಈಗ ಲಕ್ನೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹಿಳಾ ಪೊಲೀಸ್ ಮೇಲೆ ದಾಳಿ ನಡೆಸಿದ ಪ್ರಮುಖ ಆರೋಪಿ ಅನೀಸ್ ಖಾನ್ ನನ್ನು ಪೊಲೀಸರು ಬಂಧಿಸಲು ಹೋಗಿದ್ದರು. ಈ ವೇಳೆ ಎನ್‌ಕೌಂಟರ್‌ ನಡೆಸಿದಾಗ ಆರೋಪಿ ಗಾಯಗೊಂಡಿದ್ದು, ಆತನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಆತ
ಸಾವನ್ನಪ್ಪಿದ್ದಾನೆ. ಆತನ ಸಹಾಯಕರಾದ ಆಜಾದ್ ಮತ್ತು ವಿಷಂಭರ್ ದಯಾಳ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳಾ ಪೊಲೀಸ್ ಮೇಲೆ ದಾಳಿ ನಡೆಸಿದ ಘಟನೆಯ ಬಳಿಕ ಸಂತ್ರಸ್ತೆ ಗುರುತಿಸಿದ ಫೋಟೋವನ್ನು ಆಧರಿಸಿ ನಾವು ಆರೋಪಿಯನ್ನು ಗುರುತಿಸಿ, ಪತ್ತೆಹಚ್ಚಿದ್ದೇವೆ. ಇದರ ಆಧಾರದ ಮೇಲೆ ಆಯೋಧ್ಯೆ ಪೊಲೀಸರು ಮತ್ತು ವಿಶೇಷ ಕಾರ್ಯಪಡೆ, ಆರೋಪಿಯ ಮೇಲೆ ಎನ್‌ಕೌಂಟರ್‌ ನಡೆಸಿದ್ದಾಗಿ ಅಯೋಧ್ಯೆ ಹಿರಿಯ ಪೊಲೀಸ್ ಅಧೀಕ್ಷಕ ರಾಜ್ ಕರಣ್ ನಯ್ಯರ್ ತಿಳಿಸಿದ್ದಾರೆ.