ಲಸಿಕೆ ಪಡೆಯಲು ಕೋವಿನ್ ಪೋರ್ಟಲ್‌ನಲ್ಲಿ ಆಧಾರ್ ಕಾರ್ಡ್ ಕಡ್ಡಾಯವಲ್ಲ…

65
firstsuddi

ನವದೆಹಲಿ : ಕೋವಿಡ್-19 ಲಸಿಕೆ ಪಡೆಯಲು ಕೋವಿನ್ ಪೋರ್ಟಲ್ ನಲ್ಲಿ ನೋಂದಣಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದು, ಲಸಿಕೆ ಪಡೆಯಲು ಜನರಲ್ಲಿ ಆಧಾರ್ ಕಾರ್ಡ್ ಕೇಳಬೇಡಿ ಎಂದು ಸುಪ್ರೀಂಕೋರ್ಟ್ ಅಧಿಕಾರಿಗಳಿಗೆ ಸೂಚಿಸಿದೆ.

ಕೆಲವು ಕೇಂದ್ರಗಳು ವ್ಯಾಕ್ಸಿನೇಷನ್ ಗಾಗಿ ಆಧಾರ್ ಕಾರ್ಡ್ ಗೆ ಒತ್ತಾಯಿಸುತ್ತವೆ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಸೂರ್ಯ ಕಾಂತ್ ಅವರ ಪೀಠವು ಕೊವಿಡ್ ಲಸಿಕೆ ನೀಡಿಕೆ ವೇಳೆ ಗುರುತಿನ ಏಕೈಕ ಪುರಾವೆಯಾಗಿ ಆಧಾರ್ ಕಾರ್ಡ್ ಅನ್ನು ಒದಗಿಸುವಂತೆ ಒತ್ತಾಯಿಸಬೇಡಿ ಎಂದು ಹೇಳಿದೆ.

ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಮತದಾರರ ಚೀಟಿ, ಪಡಿತರ ಚೀಟಿ ಸೇರಿದಂತೆ ಒಂಬತ್ತು ಗುರುತಿನ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬಹುದು. ಆಧಾರ್ ವಿವರ ದಾಖಲಿಸುವುದು ವ್ಯಾಕ್ಸಿನೇಷನ್ ಪಡೆಯಲು ಕಡ್ಡಾಯವಲ್ಲ. ಎಲ್ಲ ಸಂಬಂಧಿತ ಅಧಿಕಾರಿಗಳು ಆರೋಗ್ಯ ಸಚಿವಾಲಯದ ನೀತಿಗೆ ಅನುಸಾರವಾಗಿ ಕಾರ್ಯನಿರ್ವಹಿಸಬೇಕು ಎಂದು ಪೀಠವು ಸೂಚಿಸಿದೆ.

ಸಚಿವಾಲಯದ ಪರ ವಾದ ಮಂಡಿಸಿದ ವಕೀಲ ಅಮನ್ ಶರ್ಮಾ, ಆಧಾರ್ ಮಾತ್ರ ಪೂರ್ವ ಷರತ್ತಲ್ಲ ಎಂದು ಪೀಠಕ್ಕೆ ತಿಳಿಸಿದರು. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಮಯಾಂಕ್ ಕ್ಷೀರಸಾಗರ್ ಅವರು, ಲಸಿಕೆ ಕೇಂದ್ರಗಳು ಆಧಾರ್ ಕಾರ್ಡ್ ಕೇಳಬಾರದು ಎಂದರು.