ಲಾರಿಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು; ತಾಯಿ-ಮಗು ಸಜೀವ ದಹನ…

54
firstsuddi

ಬೆಂಗಳೂರು: ನಗರದ ಸೋಮಪುರ ಬಳಿಯ ನೈಸ್ ರಸ್ತೆಯಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ತಾಯಿ, ಮಗು ಸಜೀವ ದಹನವಾಗಿರುವ ಘಟನೆ ನಡೆದಿದೆ.

ಮೈಸೂರು ರಸ್ತೆ ಕಡೆಯಿಂದ ಕನಕಪುರ ರಸ್ತೆಗೆ ತೆರಳುತಿದ್ದ ಕಾರು, ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದು ಬಳಿಕ ಮೋರಿಯ ಗೋಡೆಗೆ ಗುದ್ದಿದೆ. ಮೋರಿಗೆ ಗುದ್ದಿದ ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ.

ಕಾರಿನಲ್ಲಿ ದಂಪತಿ ಹಾಗೂ ಇಬ್ಬರು ಮಕ್ಕಳಿದ್ದರು. ದಂಪತಿಯನ್ನು ಮಹೇಂದ್ರನ್ ಮತ್ತು ಸಿಂಧು ಎಂದು ಗುರುತಿಸಲಾಗಿದೆ.

ಕಾರು ಮೋರಿಗೆ ಗುದ್ದಿದ ಪರಿಣಾಮ ಕಾರಿನಲ್ಲಿದ್ದ ಸಿಂಧು ಹಾಗೂ ಎರಡು ವರ್ಷದ ಪುಟ್ಟ ಮಗು ಸಾವನ್ನಪ್ಪಿದ್ದಾರೆ. ಇನ್ನು ಗಾಯಾಳು ಮಹೇಂದ್ರನ್ ಹಾಗೂ ಇನ್ನೊಂದು ಮಗುವನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಗುದ್ದಿದ್ದರಿಂದ ಲಾರಿ ಸಹ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದೆ.

ವಿಷಯ ತಿಳಿದು ಘಟನಾ ಸ್ಥಳಕ್ಕೆ ತಲಘಟ್ಟಪುರ ಸಂಚಾರ ಪೊಲೀಸರು ಭೇಟಿ ನೀಡಿದ್ದು, ಮೃತ ದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.