ವಂಚನೆ ಪ್ರಕರಣ- ಒಡಿಶಾದಲ್ಲಿ ಹಾಲಶ್ರೀ ಸ್ವಾಮೀಜಿ ಬಂಧನ…

62
firstsuddi

ಬೆಂಗಳೂರು: ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ್ ಬಾಬು ಪೂಜಾರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಹಾಲಶ್ರೀ ಸ್ವಾಮೀಜಿಯನ್ನು ಕೊನೆಗೂ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಚೈತ್ರಾ ಕುಂದಾಪುರ ಬಂಧನವಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದ ಪ್ರಕರಣದ ಮೂರನೇ ಆರೋಪಿ ವಿಜಯನಗರ ಜಿಲ್ಲೆಯ ಅಭಿನವ ಹಾಲಶ್ರೀಯನ್ನು ಇಂದು ಸಿಸಿಬಿ ಪೊಲೀಸರು ಒಡಿಶಾದ ಕಟಕ್‍ನಲ್ಲಿ ಬಂಧಿಸಿದ್ದಾರೆ.

ಕಟಕ್ ಬಳಿ ರೈಲಿನಲ್ಲಿ ಭುವನೇಶ್ವರದಿಂದ ಬೋಧ್ಗಯಾಗೆ ತೆರಳುತ್ತಿದ್ದ ವೇಳೆ ಹಾಲಶ್ರೀಯನ್ನು ಸಿಸಿಬಿ ಪೊಲೀಸರು ಹಿಡಿದಿದ್ದಾರೆ. ಒಡಿಶಾ ಪೊಲೀಸರ ಸಹಕಾರದಿಂದ ಹಾಲಶ್ರೀಯನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇಂದು ರಾತ್ರಿ ಹಾಲಶ್ರೀಯನ್ನು ಸಿಸಿಬಿ ಪೊಲೀಸರು ಬೆಂಗಳೂರಿಗೆ ಕರೆತಂದು ಕೋರ್ಟ್ ಮುಂದೆ ಹಾಜರ್ ಪಡಿಸಲಿದ್ದಾರೆ. ಹಾಲಶ್ರೀ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಜಾಮೀನು ಸಿಗೋ ಮುನ್ನವೇ ಸಿಸಿಬಿ ಪೊಲೀಸರಿಂದ ಅರೆಸ್ಟ್ ಆಗಿದ್ದಾರೆ.