ಕಲ್ಪೆಟ್ಟಾ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಂದು ವಯನಾಡು ಲೋಕಸಭಾ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದಾರೆ. ಲೋಕಸಭೆ ವಿಪಕ್ಷ ನಾಯಕರು ಹಾಗೂ ಸಹೋದರ ರಾಹುಲ್ ಗಾಂಧಿ ಅವರೊಂದಿಗೆ ಕಲ್ಬೆಟ್ಟಾದ ಹೊಸ ಬಸ್ ನಿಲ್ದಾಣದಿಂದ ತೆರೆದ ವಾಹನದಲ್ಲಿ ಭರ್ಜರಿ ರೋಡ್ ಶೋ ನಲ್ಲಿ ಪ್ರಿಯಾಂಕಗಾಂಧಿ ಪಾಲ್ಗೊಂಡಿದ್ದರು. ಈ ವೇಳೆ ಯುಡಿಎಫ್ ನಾಯಕರು, ಕಾರ್ಯಕರ್ತರು ಸೇರಿದಂತೆ ಅಸಂಖ್ಯಾತ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಹಾಗೂ ಪಕ್ಷದ ಹಿರಿಯ ನಾಯಕರು ರೋಡ್ ಶೋನಲ್ಲಿ ಪಾಲ್ಗೊಂಡರು.
ಕಲ್ಪೆಟ್ಟಾದಲ್ಲಿ ರೋಡ್ ಶೋ ಗಾಗಿ ಬೆಳಗೆಯಿಂದ ಕಾಯುತ್ತಿದ್ದ ಯುಡಿಎಫ್ ಕಾರ್ಯಕರ್ತರು, ಬೆಂಬಲಿಗರು ಮತ್ತು ಅಪಾರ ಜನಸ್ತೋಮ ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ ಅವರ ಭಾವಚಿತ್ರಗಳು, ಪಕ್ಷದ ಬಣ್ಣಗಳ ಬಲೂನ್‍ಗಳು ಮತ್ತು ಡ್ರಮ್ ಬಾರಿಸುವ ಫಲಕ ಹಿಡಿದು ಅವರನ್ನು ಆಹ್ವಾನಿಸಿದರು. ಕಾಂಗ್ರೆಸ್ ಮಿತ್ರ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದ ಬಣ್ಣಗಳ ಬಲೂನ್‍ಗಳು ರೋಡ್ ಶೋನಲ್ಲಿ ಕಂಡುಬಂದಿತು. ನವೆಂಬರ್ 13 ರಂದು ವಯನಾಡಿನಲ್ಲಿ ಉಪಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆಯಲ್ಲಿ ವಯನಾಡ್ ಮತ್ತು ರಾಯ್ ಬರೇಲಿ ಕ್ಷೇತ್ರಗಳಿಂದ ಗೆಲುವು ಸಾಧಿಸಿದ ರಾಹುಲ್ ಗಾಂಧಿ ಕೇರಳದ ಲೋಕಸಭೆ ಸ್ಥಾನವನ್ನು ಬಿಟ್ಟುಕೊಡಲು ನಿರ್ಧರಿಸಿದ ನಂತರ ಉಪಚುನಾವಣೆ ಅನಿವಾರ್ಯವಾಗಿದೆ. ಎಲ್‍ಡಿಎಫ್‍ನ ಸತ್ಯನ್ ಮೊಕೇರಿ ಮತ್ತು ಬಿಜೆಪಿಯ ನವ್ಯಾ ಹರಿದಾಸ್ ವಿರುದ್ಧ ಪ್ರಿಯಾಂಕಾ ಸ್ಪರ್ಧಿಸಲಿದ್ದಾರೆ. ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕೀಯ ಪ್ರವೇಶಿಸುವ ಮೊದಲು ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಗಾಂಧಿ ಕುಟುಂಬದ ಭದ್ರಕೋಟೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.










