ವಿಜಯಪುರದಲ್ಲಿ ಎರಡು ಬಾರಿ ಭೂಕಂಪನ – ಮನೆಯಿಂದ ಹೊರಗೆ ಓಡಿ ಬಂದ ಜನ.

68
firstsuddi

ವಿಜಯಪುರ : ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಭೂಕಂಪನದ ಅನುಭವ ಆಗಿದೆ. ಸುಮಾರು 3ರಿಂದ 4 ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ ಅಂತ ಗ್ರಾಮಸ್ಥರು ಹೇಳುತ್ತಿದ್ದಾರೆ. ಭೂ ಕಂಪನದೊಂದಿಗೆ ಉಂಟಾದ ಭಾರೀ ಸದ್ದಿಗೆ ಗ್ರಾಮಸ್ಥರೆಲ್ಲ ಬೆಚ್ಚಿ ಬಿದ್ದಿದ್ದಾರೆ. ಮನೆಯಿಂದ ಹೊರಕ್ಕೆ ಓಡಿ ಬಂದಿರುವ ಜನರು ಆತಂಕದಿಂದಲೇ ಕಾಲ ಕಳೆಯುವಂತಾಗಿದೆ.

ಮುಂಜಾನೆ 2 ಬಾರಿ ಭೂಮಿ ಕಂಪಿಸಿದೆ ಎನ್ನಲಾಗಿದೆ. ಮುಂಜಾನೆ 6.22 ಹಾಗೂ 6.24 ಕ್ಕೆ ಎರಡು ಬಾರಿ ಭೂಮಿ ಕಂಪಿಸಿದೆ. ಮುಂಜಾನೆ 6 ಗಂಟೆ 22 ನಿಮಿಷಕ್ಕೆ 4.9ರಷ್ಟು ತೀವ್ರತೆಯಲ್ಲಿ ಭೂಮಿ ಕಂಪಿಸಿದ್ರೆ, ಮುಂಜಾನೆ 6 ಗಂಟೆ 24 ನಿಮಿಷಕ್ಕೆ 4.6ರಷ್ಟು ತೀವ್ರತೆಯಲ್ಲಿ ಭೂಕಂಪನವಾಗಿದೆ.

ವಿಜಯಪುರ ನಗರದ ರೇಲ್ವೆ ಸ್ಟೇಷನ್ ಏರಿಯಾ, ಗೋಳಗುಮ್ಮಟ ಏರಿಯಾ, ಗ್ಯಾಂಗಬಾವಡಿ, ಆಶ್ರಮ ಕಾಲೋನಿ, ಜೋರಾಪುರ ಪೇಠ ಸೇರಿದಂತೆ ಹಲವು ಕಡೆಗಳಲ್ಲಿ ಭೂಮಿ ಕಂಪಿಸಿದೆ. ಅತ್ತ ತಿಕೋಟ ತಾಲೂಕಿನ ಬಾಬಾನಗರ, ಬಿಜ್ಜರಗಿ, ಘೋಣಸಗಿ ಸೇರಿದಂತೆ ಇತರ ಗ್ರಾಮಗಳಲ್ಲಿ ಭಾರಿ ಸದ್ದಿನೊಂದಿಗೆ ಭೂಮಿ ಅಲುಗಾಡಿದೆ. ಇಲ್ಲಿಯವರೆಗೆ ಇಷ್ಟು ಸದ್ದು ಆಗಿರಲಿಲ್ಲ ಎಂದು ಜನರು ಹೇಳಿದ್ದಾರೆ.

ಭೂಕಂಪನದಿಂದ ಕೆಲ ಮನೆಗಳು ಬಿರುಕು ಬಿಟ್ಟರೆ, ವಿದ್ಯುತ್ ತಂತಿಗಳು ಅಲುಗಾಡಿವೆ ಎನ್ನಲಾಗಿದೆ. ಇನ್ನು ಸಿಸಿ ಕ್ಯಾಮೆರಾಗಳಲ್ಲೂ ಭೂಕಂಪನದ ತೀವ್ರತೆಯ ದೃಶ್ಯ ದಾಖಲಾಗಿದೆ.

ಮಹಾರಾಷ್ಟ್ರದಲ್ಲೂ ಭೂಮಿ ಕಂಪಿಸಿದೆ. ಮರಬಗಿ, ತಿಕ್ಕುಂಡಿ, ಜಾಲಿಹಾಳ ಮುಚ್ಚಂಡಿ ಭಾಗದಲ್ಲೂ ಸುಮಾರು 10-15 ಸೆಕೆಂಡ್ ಗಳ ಕಾಲ ಕಂಪನ ಉಂಟಾಗಿದೆ.