ಚಿಕ್ಕಮಗಳೂರು : ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ದುಡಿದ ಶಿಕ್ಷಕರು ನಿವೃತ್ತಿ ನಂತರವೂ ಜನಮಾನಸದಲ್ಲಿ ಉಳಿಯುತ್ತಾರೆ ಎಂದು ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಹಂಪಯ್ಯ ಹೇಳಿದರು.
ನಗರದ ಆಜಾದ್ ಪಾರ್ಕ್ ಕನ್ನಡ ಶಾಲೆಯಲ್ಲಿ ಭಾರತ ಸೇವಾದಳದ ಜ್ಞಾನಜ್ಯೋತಿ ಘಟಕ. ಸೇವೆಯಿಂದ ನಿವೃತ್ತರಾದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕ ಮಹೇಶಪ್ಪ ಅವರಿಗೆ ಇಂದು ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ದೇಶದ ಆಧಾರ ಸ್ತಂಭಗಳು ಅವರು ಪ್ರಾಮಾಣಿಕತೆ ಮತ್ತು ಶ್ರದ್ದೆಯಿಂದ ಕರ್ತವ್ಯ ನಿರ್ವಹಿಸಿದರೆ ಮಾತ್ರ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ರಾಷ್ಟ್ರದ ಭವಿಷ್ಯವೂ ಉಜ್ವಲವಾಗುತ್ತದೆ ಅಂತಹ ಶಿಕ್ಷಕರು ಚಿರಸ್ಥಾಯಿಯಾಗಿ ಉಳಿಯುತ್ತಾರೆ ಎಂದರು.
ಭಾರತ ಸೇವಾದಳದ ತಾಲ್ಲೂಕು ಸಂಘಟಕ ಎಸ್.ಈ.ಲೋಕೇಶ್ವರಾಚಾರ್ ಮಾತನಾಡಿ ಅತ್ಯಂತ ಸರಳರಾಗಿದ್ದ ಮಹೇಶಪ್ಪ ಅವರು ಏನೇ ಸಮಸ್ಯೆಗಳಿದ್ದರೂ ಸಮಾಧಾನ ಚಿತ್ತದಿಂದ ಅವುಗಳನ್ನು ಪರಿಹರಿಸುತ್ತಿದ್ದರು ಎಂದು ಹೇಳಿದರು.
ಭಾರತ ಸೇವಾದಳದ ತಾಲ್ಲೂಕು ಕಾರ್ಯದರ್ಶಿಯಾಗಿ ಬಹಳಷ್ಟು ಸೇವೆ ಸಲ್ಲಿಸಿದ್ದ ಮಹೇಶಪ್ಪನವರು ತಮ್ಮ ಸೇವಾವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ್ದಾರೆ ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಸಿಆರ್‍ಪಿ ಪೂರ್ಣೇಶ್ ಮಾತನಾಡಿ ನಿವೃತ್ತಿಯೆಂದರೆ ಅಂತ್ಯವಲ್ಲ, ಅದು ನಿಜ ಜೀವನದ ಆರಂಭ ಎಂದರು.
ಸೇವೆಯಿಂದ ಶನಿವಾರ ನಿವೃತ್ತಿ ಹೊಂದಿದ ಮಹೇಶಪ್ಪ ಅವರನ್ನು ಜ್ಞಾನಜ್ಯೋತಿ ಘಟಕ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನಿಸಲಾಯಿತು.
ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಮಹೇಶಪ್ಪ ತಮ್ಮ ಸೇವಾವಧಿಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಭಾರತ ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ್, ತಾಲ್ಲೂಕು ಉಪಾಧ್ಯಕ್ಷ ಕಾಳಯ್ಯ, ಸೇವಾದಳ ಶಿಕ್ಷಕಿ ಶಶಿಕಲಾ, ಪಶುವೈದ್ಯ ಇಲಾಖೆಯ ನಿವೃತ್ತ ಅಧಿಕಾರಿ ರಾಮಚಂದ್ರಮೂರ್ತಿ ಉಪಸ್ಥಿತರಿದ್ದರು.










