ವಿಮಾನದ ಬಾತ್ರೂಮಿನಲ್ಲಿ ಕುಸಿದುಬಿದ್ದು ಪೈಲಟ್ ಸಾವು- ವಿಮಾನ ತುರ್ತು ಭೂಸ್ಪರ್ಶ…

71
firstsuddi

ಪನಾಮ: ವಿಮಾನದ ಬಾತ್ರೂಮಿನಲ್ಲಿ ಪೈಲಟ್ ಕುಸಿದು ಬಿದ್ದು ಮೃತಪಟ್ಟ ಪರಿಣಾಮ ವಿಮಾನವನ್ನು ಅಮೆರಿಕಾದ ಪನಾಮದಲ್ಲಿ
ತುರ್ತು ಭೂಸ್ಪರ್ಶ ಮಾಡಲಾಯಿತು.

ಮೃತ ಪೈಲಟ್‌ನ್ನು ಇವಾನ್ಅಂದೌರ್ (56) ಎಂದು ಗುರುತಿಸಲಾಗಿದೆ. ಮಿಯಾಮಿಯಿಂದ ಚಿಲಿಗೆ ಹೊರಟಿದ್ದ ಈ ಖಾಸಗಿ ಫ್ಲೈಟ್‌ನಲ್ಲಿ 271 ಜನರಿದ್ದರು ಎಂಬುದು ತಿಳಿದು ಬಂದಿದೆ.

ಈ ವಿಮಾನವೂ ಲಾಟಾಮ್ ಏರ್‌ಲೈನ್ಸ್‌ಗೆ ಸೇರಿದ್ದಾಗಿದ್ದು, ವಿಮಾನವೂ ಮಿಯಾಮಿ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಮೂರು ಗಂಟೆಯ ನಂತರ ಪೈಲಟ್ ಅಸ್ವಸ್ಥಗೊಂಡಿದ್ದು, ವಿಮಾನದ ಬಾತ್‌ರೂಮ್‌ನಲ್ಲೇ ಕುಸಿದು ಬಿದ್ದಿದ್ದಾರೆ. ಅವರಿಗೆ ವಿಮಾನದ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಿದರಾದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ, ಹೀಗಾಗಿ ಸಹ ಪೈಲಟ್ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ.

ವಿಮಾನವು ಪನಾಮ ಸಿಟಿಯ ಟೊಕುಮೆನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ ವೈದ್ಯಕೀಯ ತಜ್ಞರು ಪೈಲಟ್‌ನ್ನು ಪರಿಶೀಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದರು. ಮೃತ ಪೈಲಟ್ ಇವಾನ್ ಅಂದೌರ್ ಅವರು 25 ವರ್ಷಗಳ ಅನುಭವ ಹೊಂದಿದ್ದ ಬಹಳ ಅನುಭವಿ ಪೈಲಟ್ ಆಗಿದ್ದರು.

ದುರಂತದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಾಟಾಮ್ ಏರ್‌ಲೈನ್ಸ್‌, ನಡೆದಿರುವ ಈ ದುರಂತದಿಂದ ನಮಗೂ ನೋವಾಗಿದೆ. ಅಕಾಲಿಕವಾಗಿ ಸಾವಿಗೀಡಾದ ನಮ್ಮ ಉದ್ಯೋಗಿಯ ಕುಟುಂಬಕ್ಕೆ ನಾವು ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇವೆ. ವೃತ್ತಿಪರತೆ ಮತ್ತು ಸಮರ್ಪಣೆಯಿಂದ ಕೂಡಿದ್ದ ಅವರ 25 ವರ್ಷಗಳ ವೃತ್ತಿಜೀವನ ಹಾಗೂ ಅವರು ನೀಡಿದ ಅಮೂಲ್ಯ ಸೇವೆಗೆ ನಾವು ಕೃತಜ್ಞರಾಗಿರುತ್ತೇವೆ. ಹಾರಾಟದ ಸಮಯದಲ್ಲಿ ಅವರ ಜೀವ ಉಳಿಸಲು ಸಾಕಷ್ಟು ಪ್ರಯತ್ನ ಮಾಡಲಾಯ್ತಾದ್ರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿದೆ.