ವಿಮಾನ ಹಾರಾಟದ ಮಧ್ಯೆಯೇ ಮಾಜಿ ಸೈನಿಕ ಅಸ್ವಸ್ಥ; ವಿಮಾನದಲ್ಲೇ ಚಿಕಿತ್ಸೆ ನೀಡಿ ರಕ್ಷಿಸಿದ ಡಾಕ್ಟರ್.

37

ಬೆಂಗಳೂರು: ಬೆಂಗಳೂರುನಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಹಾರಾಟದ ಮಧ್ಯೆ ಅಸ್ವಸ್ಥಗೊಂಡಿದ್ದ ಮಾಜಿ ಸೈನಿಕರೊಬ್ಬರಿಗೆ ಡಾಕ್ಟರ್ ಒಬ್ಬರು ವಿಮಾನದಲ್ಲಿಯೇ ಚಿಕಿತ್ಸೆ ನೀಡಿ ರಕ್ಷಿಸಿಲಾಗಿದೆ. ಭಾನುವಾರ ಬೆಳಗ್ಗೆ 5-45ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನ ಟೇಕಾಫ್ ಆದ 45 ನಿಮಿಷಗಳಲ್ಲಿ ಪ್ರಯಾಣಿಕರೊಬ್ಬರಿಗೆ ಸಹಾಯ ಮಾಡಲು ಯಾರಾದರೂ ವೈದ್ಯರು ಮುಂದೆ ಬರುತ್ತೀರ ಎಂದು ಕ್ಯಾಬಿನ್ ಸಿಬ್ಬಂದಿ ಘೋಷಣೆ ಮಾಡಿದ್ದು, ತಕ್ಷಣ ಅವರ ಬಳಿ ತೆರಳಿದ ಚಂಡೀಗಢದ ಪಿಜಿಐಎಂಇಆರ್‍ನಲ್ಲಿ (ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ)ಯ ಎಮರ್ಜೆನ್ಸಿ ಮೆಡಿಸಿನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮೊಹಿಂದ್ರಾ ಪ್ರಯಾಣಿಕನಿಗೆ ಏನಾಗಿದೆ ಎಂಬುದನ್ನು ತಿಳಿದು ಚಿಕಿತ್ಸೆ ನೀಡಿದ್ದಾರೆ. ಕ್ಯಾಬಿನ್ ಸಿಬ್ಬಂದಿಗೆ ನೀರಿನಲ್ಲಿ ಸಕ್ಕರೆಯನ್ನು ಬೆರೆಸಿ ಎಂದು ಡಾಕ್ಟರ್ ಹೇಳಿದ್ದಾರೆ. ಅದನ್ನು ಕುಡಿದ ಮಾಜಿ ಸೈನಿಕ 15 ನಿಮಿಷಗಳಲ್ಲಿಯೇ ಸಹಜ ಸ್ಥಿತಿಗೆ ಬಂದ್ದಿದ್ದು, ಡಾಕ್ಟರ್‍ಗೆ ಧನ್ಯವಾದ ಹೇಳಿದ್ದಾರೆ. ದೇಹದ ಎಡಭಾಗದಲ್ಲಿ ಸುಸ್ತಾಗುತ್ತಿದ್ದು, ತಲೆನೋವಾಗುತ್ತಿದೆ ಎಂದು ಪ್ರಯಾಣಿಕ ಹೇಳಿದರು. ಅವರು ಮಧುಮೇಹಿಯಾಗಿದ್ದು, ನಿರಂತರವಾಗಿ ಔಷಧ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದರು. ಹೈಪೊಗ್ಲಿಸಿಮಿಯಾ (ಕಡಿಮೆ ಸಕ್ಕರೆ) ಆಗಿರಬಹುದು ಎಂದು ಡಾಕ್ಟರ್ ಭಾವಿಸಿದರು. ಇದು ಸ್ವಲ್ಪ ಕಾಲದವರೆಗೆ ಹಾಗೆಯೇ ಇದ್ದರೆ ಪ್ರಜ್ಞೆ ಕಳೆದುಕೊಂಡು ಕೋಮಾಗೆ ಜಾರುವ ಅಪಾಯವಿತ್ತು ಹೇಳಿದರು. ಪ್ರಯಾಣಿಕ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವವರೆಗೂ ಅವರ ಬಳಿಯಲ್ಲಿಯೇ ಕುಳಿತುಕೊಂಡಿದ್ದೆ ಎಂದು ಡಾ. ಮೊಹಿಂದ್ರಾ ಹೇಳಿದರು.