ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಬಿಬಿಎಂಪಿ ಹೊಸ ಪ್ಲಾನ್.

34

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಮುಗಿಯದ ಸಮಸ್ಯೆಯಾಗಿ ಜನರನ್ನೂ ಕಾಡುತ್ತಿದೆ. ಬೆಂಗಳೂರಿಗರ ಅರ್ಧಜೀವನ ಟ್ರಾಫಿಕ್‍ನಲ್ಲೇ ಕಳೆದುಹೋಗುತ್ತಿದೆ. ಇತ್ತ ಬ್ರ್ಯಾಂಡ್ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕಲು ಪಾಲಿಕೆ ಹೊಸ ಯೋಜನೆ ರೂಪಿಸಲು ಮುಂದಾಗಿದೆ. ಸದ್ಯ ದೆಹಲಿ ಮೂಲದ ಖಾಸಗಿ ಕಂಪನಿ ಜೊತೆ ಕೈಜೋಡಿಸಿರುವ ಪಾಲಿಕೆ ಹೊಸ ಡಿಪಿಆರ್ ಸಿದ್ಧಪಡಿಸಿದ್ದು, ಇದರಲ್ಲಿ ರಾಜಧಾನಿಯ ಸಂಚಾರ ವ್ಯವಸ್ಥೆ ಹಾಗೂ ಟ್ರಾಫಿಕ್ ಕಂಟ್ರೋಲ್‍ಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಮಾಹಿತಿ ಸಿದ್ಧವಾಗಿದೆ. ಈ ವರದಿಯನ್ನು ಬಿಬಿಎಂಪಿಯ ಮುಖ್ಯ ಆಯುಕ್ತರಿಗೆ ಸಲ್ಲಿಸಲಾಗಿದೆ. ಈ ಹೊಸ ಡಿಪಿಆರ್‍ನಲ್ಲಿ ರಾಜಧಾನಿಯ ವಿವಿಧ ಸ್ಥಳಗಳಲ್ಲಿ ಫ್ಲೈ ಓವರ್‍ಗಳ ನಿರ್ಮಾಣ, ಟನಲ್ ರೋಡ್‍ಗಳನ್ನು ನಿರ್ಮಿಸಿದರೆ ಟ್ರಾಫಿಕ್ ಸಮಸ್ಯೆಗೆ ಸ್ವಲ್ಪ ಮಟ್ಟಿನ ಮುಕ್ತಿ ಸಿಗಬಹುದು ಎಂದು ಯೋಚಿಸಲಾಗಿದೆ. ಇದಕ್ಕಾಗಿ ಬರೋಬ್ಬರಿ 54 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲು ಸಜ್ಜಾಗಿದೆ. ಸದ್ಯ ಹೊಸ ಡಿಪಿಆರ್ ಪ್ರಕಾರ ರಾಜಧಾನಿಯ ವಿವಿಧ ಸ್ಥಳಗಳಲ್ಲಿ ಅಂಡರ್ ಪಾಸ್, ಫ್ಲೈ ಓವರ್ ನಿರ್ಮಾಣಕ್ಕೆ ಸೂಚಿಸಲಾಗಿದೆ. ಕಳೆದ ಬಾರಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಬಜೆಟ್‍ಗಳ ಪ್ರಕಾರ ಹಲವು ಯೋಜನೆಗಳಿಗೆ ಡಿಪಿಆರ್ ಸಿದ್ಧಮಾಡಿಕೊಳ್ಳಲಾಗಿತ್ತು. ಇತ್ತ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಕೂಡ ಕೆಲವು ಯೋಜನೆಗಳ ಮೂಲಕ ರಾಜಧಾನಿಯ ಟ್ರಾಫಿಕ್ ಕಂಟ್ರೋಲ್‍ಗೆ ಭರವಸೆ ನೀಡಿದ್ದರು. ಇದೀಗ ಆ ಭರವಸೆಗಳು ಈಡೇರುವ ಮೊದಲೇ ಪಾಲಿಕೆ ಇನ್ನೊಂದು ಡಿಪಿಆರ್ ತಯಾರು ಮಾಡಿಕೊಂಡಿದೆ. ಸದ್ಯ ದೆಹಲಿ ಮೂಲದ ಕಂಪನಿ ಮೂಲಕ ರೆಡಿಯಾಗಿರೋ ಡಿಪಿಆರ್‍ಗೆ ಸರ್ಕಾರ ಹಸಿರು ನಿಶಾನೆ ತೋರಲಿದೆಯೇ, ಈ ಹೊಸ ಪ್ಲಾನ್ ಜಾರಿಯಾದ್ರೆ ರಾಜಧಾನಿಯ ಟ್ರಾಫಿಕ್‍ಗೆ ಮುಕ್ತಿ ಸಿಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.