ವಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಸಾವು ಪ್ರಕರಣ – ಇದೊಂದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದ ಸಿದ್ದರಾಮಯ್ಯ.

58
firstsuddi

ಬೆಂಗಳೂರು: ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಸಾವು ಪ್ರಕರಣ ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ.

ವಿಧಾನಸಭೆಯಲ್ಲಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಮೂವರು ರೋಗಿಗಳ ಸಾವು ಪ್ರಕರಣವನ್ನು ಸರ್ಕಾರದ ಗಮನಕ್ಕೆ ತಂದ ಸಿದ್ದರಾಮಯ್ಯ, ಜನರೇಟರ್ ಕೆಟ್ಟು, ಕರೆಂಟಿಲ್ಲದೇ ಐಸಿಯುನಲ್ಲಿದ್ದ ಮೂರು ರೋಗಿಗಳು ಮೃತಪಟ್ಟಿದ್ದಾರೆ. ಇದಕ್ಕೆ ಯಾರು ಜವಾಬ್ದಾರಿ? ಆ ಆಸ್ಪತ್ರೆಯವರ ಬಳಿ ಹಣ ಇದೆ, ಜನರೇಟರ್ ವ್ಯವಸ್ಥೆ ಮಾಡಬಹುದಿತ್ತು. ಆಸ್ಪತ್ರೆಯವರು ಹೊಣೆಗಾರರಾ? ಸರ್ಕಾರ ಹೊಣೆನಾ? ಈ ಸಾವಿಗೆ ಸರ್ಕಾರವೇ ಹೊಣೆ ಹೊರಬೇಕು ಎಂದರು.

ಈ ಪ್ರಕರಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣ್ತಿದೆ. ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು. ಇದರ ಜವಾಬ್ದಾರಿ ಆರೋಗ್ಯ ಇಲಾಖೆ ಹೊರಬೇಕು. ಮೃತರ ಕುಟುಂಬಗಳಿಗೆ ಕನಿಷ್ಟ 25 ಲಕ್ಷ ಪರಿಹಾರ ಕೊಡಿ ಎಂದು ಒತ್ತಾಯಿಸಿದ ಸಿದ್ದರಾಮಯ್ಯ ಇದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಅವರ ಈ ಆರೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾನೂನು ಸಚಿವ ಮಾಧುಸ್ವಾಮಿ, ಆಕಸ್ಮಿಕವಾಗಿ ಆದ ಮರಣವನ್ನು ಸರ್ಕಾರಿ ಪ್ರಾಯೋಜಿತ ಕೊಲೆ ಎನ್ನುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾಧುಸ್ವಾಮಿ ಮಾತಿಗೆ ಕಾಂಗ್ರೆಸ್ ಶಾಸಕರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ಇದೇ ವೇಳೆ ಸಚಿವ  ಶ್ರೀರಾಮುಲು ಮಾತನಾಡಿ, ವಿಮ್ಸ್ ಆಸ್ಪತ್ರೆಯಲ್ಲಿ 11 ರಂದು ಮುಲ್ಲಾ ಹುಸೇನ್ ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ಕಿಡ್ನಿ ವೈಫಲ್ಯ ಹಾಗೂ ಮೂತ್ರಪಿಂಡ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಅವರು ಮೃತಪಟ್ಟಿದ್ದಾರೆ. ಆದರೆ ಸರ್ಕಾರವೇ ಈ ಸಾವಿಗೆ ಹೊಣೆ ಎಂಬ ಮಾತನ್ನು ಒಪ್ಪಲು ಸಾಧ್ಯವಿಲ್ಲ. ಅವರ ಸರ್ಕಾರದ ಅವಧಿಯಲ್ಲಿ ಸಾವುಗಳು ಆಗಿದೆ. ಆದರೆ ಅವರ ಸರ್ಕಾರದ ಮಾಡಿದ್ದು ಎಂದು ಹೇಳಿಲ್ಲ ನಾವು. ಚಿಟ್ಟಮ್ಮ ಎಂಬುವವರು ಕೂಡ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆ ಸಮಯದಲ್ಲಿ ಕರೆಂಟ್ ಹೋಗಿತ್ತು ಎಂಬ ಬಗ್ಗೆ ವಿಮ್ಸ್ ಡೈರೆಕ್ಟರ್ ಜೊತೆ ಮಾತನಾಡಿದ್ದೇನೆ. ಕರೆಂಟ್ ಹೋದ ಕಾರಣಕ್ಕೆ ಸಾವು ಆಗಿಲ್ಲ. ಜನರೇಟರ್ ಬ್ಯಾಕಪ್ ಕೂಡಾ ಇದೆ. ಬೇರೆ ಕಾರಣರಿಂದ ಸಾವು ಆಗಿದೆ ಎಂದು ಸ್ಪಷ್ಟನೆ ನೀಡಿದರು.

ಆದರೆ ಇದಕ್ಕೆ ಒಪ್ಪದ ಸಿದ್ದರಾಮಯ್ಯ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗಿದೆ. 8.20ರಿಂದ 10.30 ವರಗೆ ಕರೆಂಟ್ ಹೋಗಿತ್ತು. ಜನರೇಟರ್ ಕೂಡಾ ಕೆಲಸ ಮಾಡುತ್ತಿರಲಿಲ್ಲ. ಈ ಕಾರಣದಿಂದ ವೆಂಟಿಲೇಟರ್ ಇಲ್ಲದೆ ಮೂರು ಜನರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ನಡೆದಿದ್ದೇನು..?: ನಿನ್ನೆ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್)ಯಲ್ಲಿ ಎರಡರಿಂದ ಮೂರು ತಾಸುಗಳ ಕಾಲ ಕರೆಂಟ್ ಕಟ್ ಆಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ನಲ್ಲಿದ್ದ ಮೂವರು ರೋಗಿಗಳು ಸಾವನ್ನಪ್ಪಿದ್ದರು.