ವಿಷಕಂಟನಂತೆ ಮೋದಿ 19 ವರ್ಷ ಆ ನೋವನ್ನು ಸಹಿಸಿಕೊಂಡಿದ್ದರು : ಗುಜರಾತ್ ಗಲಭೆ ಬಗ್ಗೆ ಅಮಿತ್ ಶಾ ಪ್ರತಿಕ್ರಿಯೆ…

76
firstsuddi

ನವದೆಹಲಿ : 2002ರಲ್ಲಿ ಗುಜರಾತ್ ನಲ್ಲಿ ನಡೆದಿದ್ದ ಗೋಧ್ರಾ ಗಲಭೆ ಪ್ರಕರಣದಲ್ಲಿ ನರೇಂದ್ರ ಮೋದಿ ಅವರಿಗೆ ಎಸ್ಐಟಿ (ವಿಶೇಷ ತನಿಖಾ ತಂಡ) ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿನ್ನೆ ವಜಾಗೊಳಿಸಿತ್ತು. ಇದೀಗ ಇದೇ ಪ್ರಕರಣದ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಎನ್ ಐ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕಳೆದ 19 ವರ್ಷಗಳ ಕಾಲ ಈ ಬಗ್ಗೆ ಒಂದೇ ಒಂದು ಮಾತನ್ನೂ ಆಡದೇ, ಭಗವಾನ್ ಶಿವನು ಎಲ್ಲ ವಿಷವನ್ನು ತನ್ನ ಗಂಟಲಲ್ಲಿ ಇಟ್ಟುಕೊಂಡಂತೆ ಎಲ್ಲ ನೋವನ್ನೂ ನುಂಗಿಕೊಂಡಿದ್ದಾರೆ ಎಂದರು.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಂವಿಧಾನವನ್ನು ಹೇಗೆ ಗೌರವಿಸಬೇಕು ಎಂಬ ಬಗ್ಗೆ ನರೇಂದ್ರ ಮೋದಿ ಇತರ ನಾಯಕರಿಗೆ ಮಾದರಿಯಾಗಿದ್ದಾರೆ. ಮೋದಿಯವರನ್ನು ಸಹ ಆಗ ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ, ಆಗ ಯಾರೂ ಪ್ರತಿಭಟನೆ ಮಾಡಲಿಲ್ಲ. ದೇಶಾದ್ಯಂತ ಇರುವ ಕಾರ್ಯಕರ್ತರು ಮೋದಿ ಪರವಾಗಿ ಬೀದಿಗಿಳಿಯಲಿಲ್ಲ. ನಾವು ಕಾನೂನಿಗೆ ಸಹಕಾರ ನೀಡಿದೆವು. ಆಗ ನನ್ನನ್ನು ಕೂಡ ಅರೆಸ್ಟ್ ಮಾಡಲಾಗಿತ್ತು. ನಾವ್ಯಾರೂ ಇದರ ವಿರುದ್ಧ ಪ್ರತಿಭಟಿಸಲಿಲ್ಲ. ಕೊನೆಗೂ ಇಷ್ಟು ಸುದೀರ್ಘಾವಧಿಯ ಹೋರಾಟದ ನಂತರ ಗೆಲುವು ಲಭಿಸಿದ್ದು, ಸತ್ಯ ಚಿನ್ನದ ಹೊಳಪಿನಂತೆ ಪುಟಿದೆದ್ದು ಹೊರಬಂದಿದೆ. ಮೋದಿಯವರ ವಿರುದ್ಧ ಆರೋಪ ಮಾಡಿದವರಿಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಇದ್ದಲ್ಲಿ ಅವರೆಲ್ಲರೂ ಈಗ ಮೋದಿಜಿ ಹಾಗೂ ಬಿಜೆಪಿಯ ಕ್ಷಮೆ ಕೇಳಬೇಕು ಎಂದು ಅಮಿತ್ ಶಾ ಹೇಳಿದರು.

ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ನಾನು ಬಹಳ ಎಚ್ಚರಿಕೆಯಿಂದ ಓದಿದ್ದೇನೆ. ತೀರ್ಪಿನಲ್ಲಿ ತೀಸ್ತಾ ಸೆಟಲ್ವಾಡ್ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆಕೆಯು ನಡೆಸುತ್ತಿದ್ದ ಎನ್ ಜಿಒ ನನಗೆ ಆ ಎನ್ ಜಿಒ ಹೆಸರು ನೆನಪಿಲ್ಲ. ಆದರೆ ಗಲಭೆಯ ಬಗ್ಗೆ ಆಧಾರರಹಿತ ಮಾಹಿತಿಯನ್ನು ಪೊಲೀಸರಿಗೆ ನೀಡಲಾಗಿತ್ತು. ಇದರಿಂದ ನಮ್ಮ ಮೇಲೆ ಸುಳ್ಳು ಆರೋಪ ಪಿತೂರಿ ನಡೆಸಲಾಗಿತ್ತು. ಇದೀಗ ಪ್ರಕರಣದ ಬಗ್ಗೆ ಸತ್ಯ ಹೊರಬಂದಿದ್ದು, ಸುಪ್ರೀಂ ಕೋರ್ಟ್ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದೆ. ಆರೋಪಗಳನ್ನು ಕೋರ್ಟ್ ಸರಿಯಾಗಿ ಪ್ರಶ್ನಿಸಿದೆ. ಆರೋಪಗಳನ್ನು ರಾಜಕೀಯ ಪ್ರೇರಿತ ಎಂದು ನೀವು ಹೇಳಬಹುದು, ಇದು ಸಹ ಸಾಭೀತಾಗಿದೆ. ಈ ಹೋರಾಟ ಕಳೆದ 19 ವರ್ಷಗಳಿಂದ ನಾವು ನಡೆಸಿರುವ ಹೋರಾಟ ಕಡೆಗೆ ಜಯ ನಮ್ಮದಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.