ಬೆಂಗಳೂರು: ವೃಕ್ಷಮಾತೆ, ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಹಾಸನದಿಂದ ಕರೆದುಕೊಂಡು ಬಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಈ ಬಗ್ಗೆ ತಿಮ್ಮಕ್ಕ ದತ್ತು ಪುತ್ರ ಬಳ್ಳೂರು ಉಮೇಶ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಳ್ಳೂರು ಉಮೇಶ್, ಬೆಂಗಳೂರಿನಿಂದ ತೆರಳಿ ಹಾಸನ ಜಿಲ್ಲೆಯ ಬೇಲೂರಿನಲ್ಲಿ ವಾಸವಿದ್ದರು. ಬೇಲೂರು ಮಲೆನಾಡು ಪ್ರದೇಶ ಆಗಿರುವುದರಿಂದ ಶೀತ ಜಾಸ್ತಿಯಾಗಿದೆ. ಕಳೆದ ಮೂರು ದಿನಗಳಿಂದ ಸ್ವಲ್ಪ ಉಸಿರಾಟದ ಸಮಸ್ಯೆಯಾಗಿತ್ತು. ಬೇಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕವೂ ಕಡಿಮೆಯಾಗಿರಲಿಲ್ಲ. ನಿನ್ನೆ ಉಸಿರಾಟದ ಸಮಸ್ಯೆ ಹೆಚ್ಚಳ ಹಿನ್ನೆಲೆ ಬೆಂಗಳೂರಿಗೆ ಕರೆತಂದಿದ್ದೇವೆ. ಡಾ.ರವೀಂದ್ರ ಮೆಹ್ತಾ ತಂಡ ಸಾಲುಮರದ ತಿಮ್ಮಕ್ಕರಿಗೆ ಚಿಕಿತ್ಸೆ ನೀಡುತ್ತಿದ್ದು, ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಸ್ಪಷ್ಟಪಡಿಸಿದರು.










