ಬೆಂಗಳೂರು : ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ರಾಜ್ಯದ ಕೆಲವು ಕಡೆ ವ್ಯಾಕ್ಸಿನ್ ಅಕ್ರಮ ದಂಧೆ ನಡೆಸುತ್ತಿರುವ ಆರೋಪ ಕೇಳಿ ಬಂದಿದ್ದು, ಯಾವುದೇ ಕಾರಣಕ್ಕೂ ಅಂತವರನ್ನು ಸುಮ್ಮನೆ ಬಿಡುವುದಿಲ್ಲ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಲಸಿಕೆ ಕೊರತೆ ನೀಗಿಸಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಖಾಸಗಿಯವರು ಹೆಚ್ಚಿನ ದರದಲ್ಲಿ ಲಸಿಕೆ ನೀಡುವ ಸಂಬಂಧ, ಕೇಂದ್ರ ಒಂದು ನಿಯಮ ರೂಪಿಸುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು.
ಇಂದಿನಿಂದ ರಾಜ್ಯದಲ್ಲಿ ಎರಡನೇ ಹಂತದ ಲಾಕ್ ಡೌನ್ ಅರಂಭವಾಗಿದ್ದು, ಇನ್ನಷ್ಟು ಬಿಗಿ ಕ್ರಮಕ್ಕೆ ಸೂಚನೆ ನೀಡಲಾಗಿದೆ. ರಾಜ್ಯದ ಪೊಲೀಸರು ಈಗಾಗಲೇ ಕ್ರಮಕ್ಕೆ ಮುಂದಾಗಿದ್ದಾರೆ. ಅನಗತ್ಯವಾಗಿ ಓಡಾಡುವ ವಾಹನಗಳ ಸೀಜ್ ಮಾಡುವ ಪ್ರಕರಣ ಮುಂದುವರೆಸಲಾಗುತ್ತದೆ. ಯಾವುದೇ ಕಾರಣಕ್ಕೂ ಅನಗತ್ಯವಾಗಿ ಓಡಾಡುವವರನ್ನು ಸುಮ್ಮನೆ ಬಿಡಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಲಾಕ್ ಡೌನ್ ಪರಿಣಾಮಕಾರಿಯಾಗುತ್ತಿದೆ. ಆದರೆ ಪಟ್ಟಣ ಪ್ರದೇಶದಲ್ಲಿ ಉಲ್ಲಂಘನೆ ಪ್ರಕರಣ ಜಾಸ್ತಿಯಾಗುತ್ತಿದೆ. ಹೀಗಾಗಿ ಬಿಗಿಯಾದ ಕ್ರಮ ಅನಿವಾರ್ಯವಾಗಿದೆ ಎಂದು ಸಚಿವ ಬೊಮ್ಮಾಯಿ ತಿಳಿಸಿದರು.










