ಶಾಲಾ ಬಸ್ ಡ್ರೈವರ್ ಜೊತೆಗಿನ ಪ್ರೇಮದಾಟಕ್ಕೆ 8ನೇ ತರಗತಿ ವಿದ್ಯಾರ್ಥಿನಿ ಬಲಿ…

64
firstsuddi

ಚಿಕ್ಕಮಗಳೂರು: ಶಾಲಾ ಬಸ್ ಡ್ರೈವರ್ ಜೊತೆಗಿನ ಪ್ರೇಮದಾಟಕ್ಕೆ 8ನೇ ತರಗತಿ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಅಜ್ಜಂಪುರ ಸಮೀಪದ ಬಂಕನಕಟ್ಟೆ ಬಳಿ ಶಾಲಾ ಬಸ್ ಡ್ರೈವರ್ 8ನೇ ತರಗತಿ ವಿದ್ಯಾರ್ಥಿನಿಯೊಂದಿಗೆ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡ್ರೈವರ್ ಸಂತೋಷ್ (38), ವಿದ್ಯಾರ್ಥಿನಿ ಜಾಹ್ನವಿ (14) ಸಾವಿಗೀಡಾದ ದುರ್ದೈವಿಗಳು.

ಮೃತ ಜಾಹ್ನವಿ ಅಜ್ಜಂಪುರ ತಾಲೂಕಿನ ಗಿರಿಯಾಪುರ ಗ್ರಾಮದ ಜ್ಞಾನದೀಪ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇದೇ ಶಾಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಸಂತೋಷ್ ಶಾಲಾ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು.

ತನ್ನನ್ನು ಪ್ರೀತಿಸುವಂತೆ ಜಾಹ್ನವಿಗೆ ಸಂತೋಷ್ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಪೋಷಕರು ಶಾಲಾ ಮುಖ್ಯಸ್ಥರ ಗಮನಕ್ಕೆ ತಂದಿದ್ದರು. ಆದರೂ ಸಂತೋಷ್ ವಿರುದ್ಧ ಆಡಳಿತ ಮಂಡಳಿ ಕ್ರಮ ಕೈಗೊಂಡಿರಲಿಲ್ಲ. ನಿನ್ನೆ ಸ್ನೇಹಿತರ ಜೊತೆ ಹೊಸ ವರ್ಷದ ಪಾರ್ಟಿಗೆ ಹೋಗುವುದಾಗಿ ಹೇಳಿದ್ದ ಜಾಹ್ನವಿಯನ್ನು ಸಂತೋಷ್ ತನ್ನ ಜೊತೆ ಕರೆದೊಯ್ದಿದ್ದನು. ನಂತರ ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ಇಬ್ಬರು ಸಾವಿಗೀಡಾಗಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಕುರಿತು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.