ಚಿಕ್ಕಮಗಳೂರು: ಶ್ರದ್ಧೆ ಮತ್ತು ಪರಿಶ್ರಮವಿದ್ದಲ್ಲಿ ಮಾತ್ರ ಪರೀಕ್ಷೆಗಳು ಹಾಗೂ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದು ಬೆಂಗಳೂರಿನ ಸಿವಿಲ್ ಸರ್ವಿಸ್ ಅಕಾಡೆಮಿಯ ನಿರ್ದೇಶಕ ಡಾ.ರಾಜ್‍ಕುಮಾರ್ ಹೇಳಿದರು.
ನಗರದ ಮಲೆನಾಡು ವಿದ್ಯಾಸಂಸ್ಥೆಯ ಪ್ರಥಮದರ್ಜೆ ಕಾಲೇಜಿನಲ್ಲಿ ಸ್ಫಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರುಗೊಳಿಸುವ ನಿಟ್ಟಿನಲ್ಲಿ ಕಲಾ ವಿಭಾಗ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಶಿಸ್ತು, ಶ್ರದ್ಧೆ, ವಿನಯ, ವಿಧೇಯತೆ ಮತ್ತು ಗುರಿ ಬಹಳ ಮುಖ್ಯ ಇದರ ಜೊತೆಗೆ ಪರಿಶ್ರಮ ಸಹ ಇರಬೇಕು. ಇವೆಲ್ಲವೂ ಇದ್ದಾಗ ಜೀವನಲ್ಲಿ ಯಶಸ್ಸನ್ನು ಗಳಿಸಬಹುದು ಎಂದು ಕಿವಿ ಮಾತು ಹೇಳಿದರು.
ಮಲೆನಾಡು ವಿದ್ಯಾಸಂಸ್ಥೆಯ ಕಚೇರಿ ವ್ಯವಸ್ಥಾಪಕಿ ಶ್ರೀಲಕ್ಷ್ಮೀ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಆಕರ್ಷಣೆಗಳಿಗೂ ಒಳಗಾಗದೆ ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು. ಆ ಮೂಲಕ ಕಲಿತ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಸಲಹೆ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಂಶುಪಾಲೆ ಹಸೀನಾಬಾನು, ಯುಪಿಎಸ್‍ಸಿ ಮತ್ತು ಕೆಪಿಎಸ್‍ಸಿ ಸೇರಿದಂತೆ ಮುಂಬರುವ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ಸಿವಿಲ್ ಸರ್ವಿಸ್ ಅಕಾಡೆಮಿಯ ಗುರುಪ್ರಸಾದ್, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಬಗೆ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಲಾ ವಿಭಾಗದ ಮುಖ್ಯಸ್ಥ ವೀರಣ್ಣಗೌಡ, ಉಪನ್ಯಾಸಕ ಸುಮಂತ್‍ಕುಮಾರ್ ಉಪಸ್ಥಿತರಿದ್ದರು. 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.










