ಬನದ ಹುಣ್ಣಿಮೆ ಪ್ರಯುಕ್ತ ನಡೆದ ನಾಟಕ; ಶ್ರೀ ದೇವಿ ಮಹಾತ್ಮೆ ನಾಟಕ ನೋಡುಗರ ಗಮನ ಸೆಳೆದಿತ್ತು.

17

ಚಿಕ್ಕಮಗಳೂರು ಜ16: ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕದ ಆಶ್ರಯದಲ್ಲಿ ಕಡೂರು ತಾಲೂಕಿನ ಗರ್ಜೆಯಲ್ಲಿ ಶ್ರೀ ಬನಶಂಕರಿ ಕೃಪಾಪೋಷಿತ ನಾಟಕ ಮಂಡಳಿಯ ಕಲಾವಿದರಿಂದ ನಡೆದ ಶ್ರೀ ದೇವಿ ಮಹಾತ್ಮೆ ನಾಟಕ ನೋಡುಗರ ಗಮನ ಸೆಳೆಯಿತು. ಬನದ ಹುಣ್ಣಿಮೆ ಪ್ರಯುಕ್ತ ನಡೆದ ನಾಟಕದಲ್ಲಿ ಗ್ರಾಮದ ರೈತರು ಮತ್ತು ಜಾನಪದ ಕಲಾವಿದರು ಪೌರಾಣಿಕ ವೇಷಭೂಷಣಗಳನ್ನು ತೊಟ್ಟು ತಮ್ಮ ನವಿರು ಹಾಸ್ಯ. ಚುರುಕು ಸಂಭಾಷಣೆ. ಮಿಂಚಿನ ನೃತ್ಯ. ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರನ್ನು 5 ಗಂಟೆಗೂ ಅಧಿಕ ಕಾಲ ಹಿಡಿದಿಟ್ಟರು. ವೇದಿಕೆಯಲ್ಲಿ ರಾರಾಜಿಸಿದ ಪೌರಾಣಿಕ ವೇಷಭೂಷಣಗಳು. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದವರಂತೆ ಅಭಿನಯಿಸಿದ ಕಲಾವಿದರು ಪೌರಾಣಿಕ ಲೋಕವನ್ನು ಅನಾವರಣಗೊಳಿಸಿ ನೋಡುಗರನ್ನು ಮಂತ್ರಮುಗ್ಧಗೊಳಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ಕಡೂರು ತಾಲೂಕು ಅಧ್ಯಕ್ಷ ಜಗದೀಶ್ವರಾಚಾರ್ ನಿರ್ದೇಶನದಲ್ಲಿ ಮೂಡಿ ಬಂದ ನಾಟಕದಲ್ಲಿ ಪರಿಷತ್ತಿನ ಬಹಳಷ್ಟು ಕಲಾವಿದರು ಅಭಿನಯಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡರು. ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್ ಒಂದು ಕಾಲದಲ್ಲಿ ಹಳ್ಳಿ ಜನರ ಜೀವನಾಡಿಯಾಗಿದ್ದು. ಅವರ ಮನರಂಜನೆಯ ಏಕೈಕ ಮಾಧ್ಯಮವಾಗಿದ್ದ ಬಯಲು ನಾಟಕಗಳು ಆಧುನಿಕತೆಯ ಭರದಲ್ಲಿ ಕಣ್ಮರೆಯಾಗುತ್ತಿರುವುದು ದುರಂತ ಎಂದರು. ಹಿಂದಿನ ಬಯಲು ನಾಟಕಗಳು ಗ್ರಾಮದ ಜನರನ್ನು ಒಗ್ಗೂಡಿಸುವುದರ ಜೊತೆಗೆ ಅವರಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬೆಳೆಸುತ್ತಿದ್ದವು. ಮನರಂಜನೆ ನೀಡುವುದರ ಜೊತೆಗೆ ನೈತಿಕ ಮೌಲ್ಯಗಳನ್ನೂ ಕಲಿಸುತ್ತಿದ್ದವು ಎಂದು ಹೇಳಿದರು. ಆರೋಗ್ಯವಂತ ಸಮಾಜ ಪುನ: ನಿರ್ಮಾಣವಾಗಬೇಕಾದರೆ ನಮ್ಮ ಯುವಜನತೆ. ವಿಶೇಷವಾಗಿ ಗ್ರಾಮೀಣ ಜನತೆ ಆಧುನಿಕತೆಯ ವ್ಯಾಮೋಹದಿಂದ ಹೊರಬರಬೇಕು ಬಯಲು ನಾಟಕಗಳು. ಜಾನಪದ ಕಲೆ. ಸಾಹಿತ್ಯ ಮತ್ತು ಸಂಸ್ಕೃತಿಯತ್ತ ಮುಖ ಮಾಡಬೇಕು ಎಂದು ಕಿವಿ ಮಾತು ಹೇಳಿದರು. ಶರಣ ಸಾಹಿತ್ಯ ಪರಿಷತ್ತಿನ ಮುಖಂಡ ದೇವಾನಂದ್ ಮಾತನಾಡಿ ನಾಟಕ ಪ್ರದರ್ಶನ ಮಾಡುವ ಮೂಲಕ ಗರ್ಜೆ ಗ್ರಾಮಸ್ಥರು ಉಳಿದ ಹಳ್ಳಿಗಳಿಗೆ ಮಾದರಿಯಾಗಿದ್ದಾರೆ ಎಂದರು. ದೇವಾಂಗ ಸಮಾಜದ ಅಧ್ಯಕ್ಷ ಸುರೇಶ್ ಮಾತನಾಡಿ ಭಾರತೀಯ ರಂಗಭೂಮಿಗೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ನಾಟಕಗಳು ಹಿಂದೆ ಹಲವು ಜನರಿಗೆ ಜೀವನಾಧಾರವಾಗಿದ್ದವು. ಈಗ ನಾಟಕಗಳು ಅಳಿವಿನಂಚಿಗೆಬಂದಿರುವುದರಿಂದ ಕಲಾವಿದರ ಬದುಕು ಬೀದಿ ಪಾಲಾಗುತ್ತಿದೆ ಎಂದು ವಿಷಾದಿಸಿದರು. ಬನಶಂಕರಿ ಕೃಪಾಪೋಷಿತ ನಾಟಕ ಮಂಡಳಿ ಅಧ್ಯಕ್ಷ ದಯಾನಂದ್. ಗ್ರಾಮ ಪಂಚಾಯತಿ ಅಧ್ಯಕ್ಷ ಮಲ್ಲಿಕಾರ್ಜುನ. ಚೇತನ್. ಗ್ರಾಮದ ಮುಖಂಡರಾದ ಮರುಳಸಿದ್ದಪ್ಪ. ಗಿರೀಶ್. ಶಿವಣ್ಣ. ಜಯಣ್ಣ. ಸಾಹಿತಿ ಬಿಳಿಗಿರಿ ವಿಜಯಕುಮಾರ್. ಚಿಕ್ಕನಲ್ಲೂರು ಜಯಣ್ಣ ಉಪಸ್ಥಿತರಿದ್ದರು.