ಸಹೋದರಿಗೆ ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಕೊಲೆಗೈದ ಸಹೋದರ…

326
firstsuddi

ಕಾಸರಗೋಡು : ಸಹೋದರನೋರ್ವ ತನ್ನ ಸಹೋದರಿಯನ್ನೇ ಐಸ್ ಕ್ರೀಮ್‍ನಲ್ಲಿ ವಿಷ ಬೆರೆಸಿ ಹತ್ಯೆ ಮಾಡಿರುವ ಘಟನೆ ವೆಳ್ಳರಿಕುಂಡು ಪೊಲೀಸ್ ಠಾಣಾ ವ್ಯಾಪ್ತಿಯ ಬಳಾಲ್‍ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತ ಸಹೋದರಿಯನ್ನು ಬಳಾಲ್ ಅರಂಗಲ್‍ನ ಬೆನ್ನಿ ಅವರ ಪುತ್ರಿ ಆನ್ ಮೇರಿ(16) ಎಂದು ಗುರುತಿಸಲಾಗಿದೆ. ಈತ ಕೇವಲ ಸಹೋದರಿಯನ್ನಲ್ಲದೆ ತನ್ನ ತಂದೆ ತಾಯಿಯನ್ನೂ ಕೂಡಾ ಕೊಲೆ ಮಾಡಲು ಯತ್ನಿಸಿದ್ದು, ತಂದೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳೀದು ಬಂದಿದೆ.
ಕೃತ್ಯಕ್ಕೆ ಸಂಬಂಧಪಟ್ಟಂತೆ ಆರೋಪಿ ಅಲ್ಬಿನ್ ಬೆನ್ನಿ(22) ನನ್ನು ಪೊಲೀಸರು ಬಂಧಿಸಿದ್ದಾರೆ. ತಂದೆ ಬೆನ್ನಿ ಜಿಲ್ಲಾಸ್ಪತ್ರೆ ಹಾಗೂ ತಾಯಿ ಬೆಸ್ಸಿ ಕಣ್ಣೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ವಾರಗಳ ಹಿಂದೆ ಈ ಘಟನೆ ನಡೆದಿದ್ದು, ಗಂಭೀರ ಸ್ಥತಿಯಲ್ಲಿದ್ದ ಮೇರಿ ಆಗಸ್ಟ್ 5ರಂದು ಮೃತಪಟ್ಟಿದ್ದಾರೆ.
ಮನೆಯಲ್ಲೇ ತಯಾರಿಸಿದ ಐಸ್ ಕ್ರೀಂನ್ನು ಸಹೋದರಿ ಹಾಗೂ ತಂದೆ-ತಾಯಿ ಸೇವಿಸಿದ್ದರು. ಐಸ್ ಕ್ರೀಂ ಸೇವಿಸಿದ ಬಳಿಕ ವಾಂತಿ ಬೇಧಿ ಸೇರಿದಂತೆ ಅಸ್ವಸ್ಥತೆ ಉಂಟಾಗಿತ್ತು. ಹಳಸಿದ ಆಹಾರ ಸೇವನೆಯಿಂದ ಅಸ್ವಸ್ಥತೆ ಉಂಟಾಗಿರುವುದಾಗಿ ನಂಬಿ ಮೂವರು ಮನೆ ಮದ್ದನ್ನು ಸೇವಿಸಿದ್ದರು. ಎರಡು ದಿನಗಳ ಬಳಿಕ ಆನ್ ಮೇರಿ ಅಸ್ವಸ್ಥಗೊಂಡಿದ್ದು, ಇದರಿಂದ ಚಿರುಪ್ಪುಯದ ಆಸ್ಪತ್ರೆಗೆ ದಾಖಲಿಸಲಾಯಿತು. ಈ ನಡುವೆ ಆನ್ ಮೇರಿಗೆ ಹಳದಿ ಕಾಮಾಲೆ ಕಂಡುಬಂದಿತ್ತು. ಸ್ಥತಿ ಗಂಭೀರಗೊಂಡು ನಂತರ ಮೃತಪಟ್ಟರು. ಇದಲ್ಲದೆ ಬೆನ್ನಿ ಅವರ ಸ್ಥತಿಯೂ ಗಂಭೀರವಾಗಿದ್ದು, ಪಯ್ಯನ್ನೂರಿನ ಆಸ್ಪತ್ರೆಗೆ ದಾಖಲಿಸಲಾಯಿತು.
ಹಳಸಿದ ಆಹಾರ ಸೇವನೆಯಿಂದ ಅಸ್ವಸ್ಥತೆ ಉಂಟಾಗಿದ್ದಾಗಿ ಆರಂಭದಲ್ಲಿ ನಂಬಲಾಗಿತ್ತು. ಆದರೆ ಅನ್ನಾ ಮೇರಿ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಮರಣೋತ್ತರ ಪರೀಕ್ಷೆಯಿಂದ ಅನ್ನಾ ಮೇರಿ ವಿಷ ಸೇವನೆಯಿಂದ ಮೃತಪಟ್ಟಿರುವುದಾಗಿ ಖಚಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ತನಿಖೆ ನಡೆಸಿದ ಪೊಲೀಸರು ಆಲ್ಬಿನ್ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಕುಟುಂಬದ ನಾಲ್ವರ ಪೈಕಿ ಮೂವರ ದೇಹದೊಳಗೆ ವಿಷ ಪದಾರ್ಥ ಪತ್ತೆಯಾಗಿದ್ದರೂ ಆಲ್ಬಿನ್ ನಲ್ಲಿ ಪತ್ತೆಯಾಗಿರಲಿಲ್ಲ. ಇದರಿಂದ ಆಲ್ಬಿನ್ ನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಹೊರ ಬಂದಿದೆ. ಐಸ್ ಕ್ರೀಂನಲ್ಲಿ ಇಲಿ ವಿಷ ಬೆರೆಸಿ ನೀಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.