ಸಾರಿಗೆ ಇಲಾಖೆ ನೌಕರರ ವೇತನ ಪರಿಷ್ಕರಣೆಗೆ ರಾಜ್ಯ ಸರ್ಕಾರ ಬದ್ಧ : ಸಚಿವ ಶ್ರೀರಾಮುಲು.

50
firstsuddi

ಬೆಂಗಳೂರು : ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ತಿಳಿಸಿದ್ದಾರೆ. ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಬಿ.ಎಸ್.ಅರುಣ್ ಪ್ರಶ್ನೆಗೆ ಸಚಿವ ಶ್ರೀರಾಮುಲು ಉತ್ತರಿಸಿದರು.

ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಆಗಬೇಕು. ಆದರೆ 2016 ರ ನಂತರ ಪರಿಷ್ಕರಣೆ ಆಗಿಲ್ಲ. ಇದೀಗ ವೇತನ ಪರಿಷ್ಕರಣೆಗೆ ಸರ್ಕಾರ ಬದ್ಧವಾಗಿದೆ. ನಾಲ್ಕು ನಿಗಮಗಳ ಎಂಡಿಗಳ ಜೊತೆ ಸಭೆ ನಡೆಸಿ ಸಮಿತಿ ರಚಿಸಿ ಅವರಿಂದ ವರದಿ ಪಡೆದು ಸರ್ಕಾರಕ್ಕೆ ಕಳಿಸಲಾಗಿದೆ ಎಂದು ಹೇಳಿದರು.

2020-21 ರಲ್ಲಿ ಬಹಳ ಜನ ನೌಕರರು ಮುಷ್ಕರಕ್ಕೆ ಹೋದಾಗ ವೇತನ ಪರಿಷ್ಕರಣೆ ಬೇಡಿಕೆ ಇರಿಸಿ ಬೀದಿಗಿಳಿದು ಹೋರಾಡಿದ್ದರು. ಮಾತುಕತೆ ಮೂಲಕ ಅಂದು ಸಮಸ್ಯೆ ಪರಿಹರಿಸಲಾಗಿತ್ತು. ಕಳೆದ ಎರಡು ವರ್ಷದಲ್ಲಿ ನಮಗೆ ಸಾಕಷ್ಟು ತೊಂದರೆಯಾಗಿದೆ. ಕೋವಿಡ್ ನಂತರ ಪ್ರಯಾಣ ದರ ಹೆಚ್ಚಿಸಲಾಗಲಿಲ್ಲ, ಡೀಸೆಲ್ ದರ ಹೆಚ್ಚಾಗಿದೆ. ಪ್ರತಿದಿನ 15 ಕೋಟಿ ಹಣ ಡೀಸೆಲ್ ಗೆ ವ್ಯಯವಾಗುತ್ತಿದೆ. ಹಾಗಾಗಿ ಕಷ್ಟದ ಸ್ಥಿತಿ ಇದೆ. ಆದರೂ ಸಿಎಂ ಕೂಡ ವೇತನ ಪರಿಷ್ಕರಣೆ ಚಿಂತನೆ ಮಾಡಿದ್ದಾರೆ. ಆದಷ್ಟು ಶೀಘ್ರದಲ್ಲಿ ವೇತನ ಪರಿಷ್ಕರಣೆ ಸಮಸ್ಯೆ ಇತ್ಯರ್ಥ ಮಾಡಲಿದ್ದೇವೆ ಎಂದರು.

ನಾಲ್ಕು ನಿಗಮ ಲಾಭಕ್ಕೆ ಬರಲು ಪೂರಕವಾಗಿ ವರದಿ ನೀಡಲು ರಚಿಸಿದ್ದ ಶ್ರೀನಿವಾಸಮೂರ್ತಿ ಸಮಿತಿ ವರದಿ ಈಗಾಗಲೇ ಬಂದಿದೆ. ಎಲ್ಲವನ್ನೂ ನೋಡಿ ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ದಿನದಲ್ಲಿ ಸಿಎಂ ಜೊತೆ ಚರ್ಚಿಸಿ ವೇತನ ಪರಿಷ್ಕರಣೆ ಕುರಿತು ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದರು.

ಹೆಡ್ ಲೈಟ್ ಗಳಲ್ಲಿ ಹೈ ಬೀಮ್ ಹಾಕಿ ವಾಹನ ಚಲಾಯಿಸಿದರೆ ಕೇಸ್ : ಯಾವುದೇ ಮಾದರಿಯ ವಾಹನಗಳಲ್ಲಿನ ಹೆಡ್ ಲೈಟ್ ಗಳಲ್ಲಿ ಹೈ ಬೀಮ್ ಹಾಕಿ ವಾಹನ ಚಾಲನೆ ಮಾಡಿದರೆ ದಂಡ ಹಾಕುವ ಜೊತೆ ಪ್ರಕರಣವನ್ನು ದಾಖಲು ಮಾಡಲಾಗುತ್ತದೆ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ವೈ.ಎಂ ಸತೀಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೈ ಬೀಮ್ ಲೈಟ್ ನಿಂದ ಅಪಘಾತವಾದ ಪ್ರಕರಣಗಳು ಇತ್ತೀಚೆಗೆ ಯಾವುದೂ ನಮ್ಮ ಗಮನಕ್ಕೆ ಬಂದಿಲ್ಲ. ಆದರೂ ನಾವು ಹೈ ಬೀಮ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. 295 ಕೋಟಿ ರೂ. ಹಣ ರಸ್ತೆ ಸುರಕ್ಷತೆಗೆ ಇರಿಸಲಾಗಿದೆ. ಹೈ ಬೀಮ್ ಲೈಟ್ ಹಾಕಿಕೊಂಡು ಬರುವ ಟ್ರಕ್, ಬೈಕ್ ಸವಾರರಿಗೆ 500 ರೂ.ದಂಡ ಹಾಕುವ ಕೆಲಸ ಮಾಡಲಾಗಿದೆ ಎಂದರು.

ರಾಜ್ಯದ ಕೆಲವೊಂದು ಜಾಗ ಬ್ಲಾಕ್ ಸ್ಪಾಟ್ ಎಂದು ಗುರುತಿಸಲಾಗಿದೆ. 342 ಬ್ಲಾಕ್ ಸ್ಪಾಟ್ ಉಳಿದಿವೆ. ಈಗಾಗಲೇ 600 ಬ್ಲಾಕ್ ಸ್ಪಾಟ್ ತೆರವು ಮಾಡಿದ್ದು, ಉಳಿದವನ್ನೂ ತೆಗೆಯುವ ಕೆಲಸ ಮಾಡುತ್ತೇವೆ. ಹೈ ಬೀಮ್ ಹಾಕಿದವರಿಗೆ ದಂಡದ ಜೊತೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಕಳೆದ 3-4 ವರ್ಷಗಳಲ್ಲಿ 8 ಸಾವಿರ ಕೇಸ್ ಇತ್ತು. ಈಗ ಕೇವಲ 703 ಕೇಸ್ ಇದೆ. ಜಾಗೃತಿಯಿಂದ ಕೇಸ್ ಕಡಿಮೆ ಆಗಿದೆ ಅಂತ ಮಾಹಿತಿ ನೀಡಿದರು.