ಸಾರ್ವಜನಿಕರ ಗಮನ ಸೆಳೆದ ಮಂಗಳೂರು ಫಲಪುಷ್ಪ ಪ್ರದರ್ಶನ.

37

ಮಂಗಳೂರು: ಹೂವುಗಳ ರಾಶಿಯಲ್ಲಿ ಅರಳಿದ ಫ್ರಾನ್ಸ್ ದೇಶದ ಐಫೆಲ್ ಟವರ್, ತರಕಾರಿ, ಹಣ್ಣು ಹಂಪಲು, ಸಿರಿಧಾನ್ಯಗಳಿಂದ ಕಳೆಗಟ್ಟಿರುವ ಶಿವಲಿಂಗ, ಅಲಂಕಾರಕ್ಕೆ ಬಳಸುವ ಎಲೆಗಳಿಂದ ತಯಾರಾಗಿರುವ ಕಂಬಳ ಕೋಣಗಳು ಇವೆಲ್ಲವೂ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನದಲ್ಲಿ ಸಾರ್ವಜನಿಕರ ಗಮನ ಸೆಳೆದಿವೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ತೋಟಗಾರಿಕೆ ಇಲಾಖೆ ಹಾಗೂ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿಯ ಆಶ್ರಯದಲ್ಲಿ ಗುರುವಾರ ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ಆರಂಭವಾಗಿದ್ದು, ಭಾನುವಾರದವರೆಗೆ ಈ ಆಕರ್ಷಣೆ ಇರಲಿದೆ. 2 ಲಕ್ಷ ಹೂಗಳಿಂದ ತಯಾರಿಸಲಾದ 22 ಅಡಿ ಎತ್ತರ ಹಾಗೂ 12 ಅಡಿ ಅಗಲದ ಐಫೆಲ್ ಟವರ್, ವಿವಿಧ ಕಲಾಕೃತಿಗಳು ನೋಡುಗರ ಗಮನ ಸೆಳೆಯುತ್ತಿವೆ. ವಿವಿಧ ಅಲಂಕಾರಿಕ ಗಿಡಗಳು, ಬೋನ್ಸಾಯ್ ಗಿಡಗಳ ಪ್ರದರ್ಶನ, ಇಕೆಬಾನೆ ಹೂವಿನ ಜೋಡಣೆಯ ಪ್ರದರ್ಶಗಳನ್ನು ಆಯೋಜಿಸಲಾಗಿದೆ. ಸೇವಂತಿಗೆ, ಚೆಂಡುಹೂ, ಸಾಲ್ವಿಯ, ಜೀನಿಯಾ, ಮುಂತಾದ ಹೂವುಗಳನ್ನು ಬಳಸಿಕೊಂಡು ಅಲ್ಲಲ್ಲಿ ಪ್ರತ್ಯೇಕವಾಗಿ ಜೋಡಿಸಿರುವುದು, ಸಣ್ಣಪುಟ್ಟ ಕೈತೋಟ ನೋಡುಗರ ಗಮನ ಸೆಳೆಯುತ್ತಿವೆ. ಫಲಪುಷ್ಪ ಪ್ರದರ್ಶನ ಈ ಕುರಿತು ಮಾತನಾಡಿದ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ಈ ಫಲಪುಷ್ಪ ಪ್ರದರ್ಶನ ವಿಶೇಷ ಆಕರ್ಷಣೆ ಒಳಗೊಂಡಿದೆ. ಎರಡು ಲಕ್ಷ ಹೂವುಗಳಿಂದ ಮಾಡಿದ ಐಫೆಲ್ ಟವರ್ ಮಾದರಿ ಎಲ್ಲರ ಗಮನ ಸೆಳೆಯುತ್ತಿದೆ. ವಿವಿಧ ರೀತಿಯ ಹೂವು, ತರಕಾರಿಗಳನ್ನು ಬಳಸಿ ಕಲಾಕೃತಿ ರಚಿಸಲಾಗಿದೆ. ಪ್ರದರ್ಶನ ಮತ್ತು ಮಾರಾಟವನ್ನು ಈ ಮೇಳದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.