ಸಿಸಿಬಿ ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ…

58
firstsuddi

ಮಂಗಳೂರು: “ಡ್ರಗ್ಸ್ ಫ್ರಿ ಮಂಗಳೂರು” ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಮುಂದುವರಿಸಿದ ಕಾರ್ಯಾಚರಣೆಯಲ್ಲಿ ಮಂಗಳೂರು ನಗರದಾದ್ಯಂತ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತುವಾದ ಎಂಡಿಎಂಎ(ಮೆಥಿಲೆನೆ ಡಿಯಾಕ್ಸಿ ಮೆಥಾಂಫೆಟಮೈನ್)ಅನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ದಸ್ತಗಿರಿ ಮಾಡಿರುತ್ತಾರೆ.

ಮಂಗಳೂರು ನಗರದ ಕೆ ಎಸ್ ರಾವ್ ರಸ್ತೆ ಪರಿಸರದಲ್ಲಿ ವ್ಯಕ್ತಿಗಳಿಬ್ಬರು ಅಕ್ರಮವಾಗಿ ಎಂಡಿಎಂಎ ಮಾದಕ ವಸ್ತುವನ್ನು ವಶದಲ್ಲಿರಿಸಿಕೊಂಡು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಎಮ್‍ಡಿಎಮ್‍ಎ ಎಂಬ ನಿಷೇದಿತ ಮಾದಕ ವಸ್ತುವನ್ನು ಹೊಂದಿದ ಉಪ್ಪಿನಂಗಡಿ ನಿವಾಸಿ ಪಿ.ಎಸ್. ಅಬ್ದುಲ್ ಅಜೀಜ್ ಯಾನೆ ಅಜೀಜ್(31) ಕಾಟಿಪಳ್ಳ ನಿವಾಸಿ ಅಕ್ಷಿತ್ ಕುಮಾರ್(26) ಎಂಬವರನ್ನು ವಶಕ್ಕೆ ಪಡೆದುಕೊಂಡು ಅವರ ವಶದಿಂದ ಒಟ್ಟು 35 ಗ್ರಾಂ ತೂಕದ ರೂ. 1,75,000/-ಮೌಲ್ಯದ ಎಂಡಿಎಂಎ ಮಾದಕ ವಸ್ತು, ಮೊಬೈಲ್ ಫೋನ್ ಗಳು-2, ನಗದು ರೂ. 600/- ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 1,96,000/-ಆಗಬಹುದು. ಆರೋಪಿಗಳ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.

ಆರೋಪಿಗಳ ಪೈಕಿ ಅಬ್ದುಲ್ ಅಜೀಜ್ ಯಾನೆ ಅಜೀಜ್ ಎಂಬಾತನ ವಿರುದ್ಧ ಈ ಹಿಂದೆ ಉಪ್ಪಿನಂಗಡಿ, ವಿಟ್ಲ ಹಾಗೂ ಉರ್ವಾ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿದ ಮೂರು ಪ್ರಕರಣ ದಾಖಲಾಗಿರುತ್ತದೆ. ಇತ್ತೀಚೆಗೆ ಸುಮಾರು 15 ದಿನಗಳ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಬಿಡುಗಡೆಗೊಂಡಿದ್ದ ಈತ ಮತ್ತೆ ಅದೇ ಮಾದಕ ವಸ್ತು ಮಾರಾಟ ದಂಧೆ ನಡೆಸುತ್ತಿದ್ದನು.

ಈ ಮಾದಕ ವಸ್ತು ಮಾರಾಟ ಜಾಲದ ಪತ್ತೆ ಕಾರ್ಯವನ್ನು ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ ವಾಲ್ ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಯವರು ನಡೆಸಿರುತ್ತಾರೆ.