ನವದೆಹಲಿ : ಸ್ಪೈಸ್ ಜೆಟ್ ವಿಮಾನದಲ್ಲಿ ಮಹಿಳಾ ಸಿಬ್ಬಂದಿ ಜೊತೆಗೆ ಅನುಚಿತವಾಗಿ ವರ್ತಿಸಿದ ಕಾರಣಕ್ಕೆ ಪ್ರಯಾಣಿಕನನ್ನು ವಿಮಾನದಿಂದ ಕೆಳಗಿಳಿಸಲಾಗಿದೆ.
ಜನವರಿ 23, 2023 ರಂದು, ಸ್ಪೈಸ್ಜೆಟ್ ವಿಮಾನ ಎಸ್ಜಿ-8133 ದೆಹಲಿಯಿಂದ ಹೈದರಾಬಾದ್ಗೆ ಹೊರಡಬೇಕಿತ್ತು. ದೆಹಲಿಯಲ್ಲಿ ಬೋರ್ಡಿಂಗ್ ಸಮಯದಲ್ಲಿ, ಒಬ್ಬ ಪ್ರಯಾಣಿಕ ಮಹಿಳಾ ಕ್ಯಾಬಿನ್ ಸಿಬ್ಬಂದಿಯೊಂದಿಗೆ ಅಶಿಸ್ತಿನ ಮತ್ತು ಅನುಚಿತ ರೀತಿಯಲ್ಲಿ ವರ್ತಿಸಿದ್ದಾನೆ. ತಕ್ಷಣ ಸಿಬ್ಬಂದಿ ಪಿಐಸಿ ಮತ್ತು ಭದ್ರತಾ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಆತ ಹಾಗೂ ಆತನ ಜೊತೆ ಪ್ರಯಾಣಿಸುತ್ತಿದ್ದ ಸಹ ಪ್ರಯಾಣಿಕರನ್ನು ಇಳಿಸಿ ಭದ್ರತಾ ತಂಡಕ್ಕೆ ಹಸ್ತಾಂತರಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಯಾಣಿಕ ಸಿಬ್ಬಂದಿಗಳಲ್ಲಿ ಒಬ್ಬರನ್ನು ಅಸಭ್ಯವಾಗಿ ಮುಟ್ಟಿದ್ದಾನೆ ಎಂದು ಮಹಿಳಾ ಸಿಬ್ಬಂದಿ ಆರೋಪಿಸಿದ್ದಾರೆ. ಮತ್ತೊಂದೆಡೆ, ವಿಮಾನದಲ್ಲಿ ತುಂಬಾ ಜನದಟ್ಟಣೆ ಇದ್ದುದ್ದರಿಂದ ಹೀಗಾಗಿದೆ ಎಂದು ಪ್ರಯಾಣಿಕ ಕೂಡ ಹೇಳಿದ್ದಾನೆ,. ಆದರೂ ಪ್ರಯಾಣಿಕ ಕ್ಷಮಾಪಣೆ ಪತ್ರ ಬರೆದುಕೊಟ್ಟಿದ್ದಾರೆ. ಆದರೆ ಮುಂದೆ ಜಗಳವಾಗಬಾರದೆಂದು ಪ್ರಯಾಣಿಕನನ್ನು ಕೂಡಲೇ ವಿಮಾನದಿಂದ ಕೆಳಗಿಳಿಸಿ ಭದ್ರತಾ ಸಿಬ್ಬಂದಿಗೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.










