ನವದೆಹಲಿ : ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನವಾದ ಆಗಸ್ಟ್ 15 ರಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ ಕಾರ್ಯಕ್ರಮದ ವೇಳೆ ಭಯೋತ್ಪಾದಕ ಚಟುವಟಿಕೆಗಳು ನಡೆಯುವ ಬೆದರಿಕೆಗಳು ಬಂದಿದೆ. ಈ ಹಿನ್ನೆಲೆ ಕೆಂಪುಕೋಟೆಯ ಸುತ್ತ ಭಾರಿ ಭದ್ರತೆ ನಿಯೋಜಿಸಲು ಸಿದ್ದತೆಗಳು ಆರಂಭಗೊಂಡಿದೆ.
75ನೇ ಸ್ವಾತಂತ್ರ್ಯ ದಿನಾಚರಣೆಗೆ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗಳಿಂದ ಸಂಭವನೀಯ ದಾಳಿ ಬೆದರಿಕೆಯ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಜಪಾನ್ ನಲ್ಲಿ ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ಜಪಾನ್ ನ ಮಾಜಿ ಪ್ರಧಾನಿ ಶಿಂಜೋ ಅಬೆ ಮಾದರಿಯಂತೆ ದಾಳಿ ನಡೆಯುವ ಬಗ್ಗೆ ಸಂಚು ರೂಪಿಸಲಾಗಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಹೀಗಾಗಿ ಕಟ್ಟುನಿಟ್ಟಾದ ಪ್ರವೇಶ ನಿಯಮಗಳನ್ನು ಜಾರಿಗೊಳಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಲಾಗಿದೆ.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಕೆಂಪುಕೋಟೆಯ ಸುತ್ತಮುತ್ತ 1 ಸಾವಿರಕ್ಕೂ ಅಧಿಕ ಇಂಟರ್ನೆಟ್ ಪ್ರೋಟೋಕಾಲ್ ಆಧರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧಾರ ಮಾಡಲಾಗಿದೆ. ಕೋಟೆಯ ಸುತ್ತಲೂ ಐಪಿ ಆಧರಿತ 2 ಮೆಗಾಪಿಕ್ಸೆಲ್ ನ ಶೇ.80 ರಷ್ಟು ಸಿಸಿಟಿವಿ ಕ್ಯಾಮೆರಾಗಳು ಮತ್ತು 4 ಮೆಗಾಪಿಕ್ಸಲ್ ನ ಶೇ.20 ಸಿಸಿಟಿವಿಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಭದ್ರತೆಗೆ ಇಡಲಾಗುತ್ತಿದೆ.










