ಬೆಂಗಳೂರು : ಹಿಜಬ್ ಪ್ರಕರಣದ ಅರ್ಜಿ ಹೈಕೋರ್ಟ್ ನ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ.
ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಹಾಕಿಕೊಳ್ಳಲು ಅವಕಾಶ ನೀಡಬೇಕು ಎಂದು ಕೋರಿ ವಿದ್ಯಾರ್ಥಿಗಳು 4 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ಹೈಕೋರ್ಟ್ ನ ಎಸ್.ಕೃಷ್ಣ ದೀಕ್ಷಿತ್ ಅವರಿದ್ದ ಪೀಠ ವಿಚಾರಣೆ ನಡೆಸುತ್ತಿತ್ತು. ಈ ವೇಳೆ ಅರ್ಜಿದಾರರ ಪರ ಮತ್ತು ಸರ್ಕಾರದ ಪರ ವಕೀಲರಿಗೆ ನ್ಯಾಯಮೂರ್ತಿಗಳು ಪ್ರಕರಣವನ್ನು ವಿಸ್ತೃತ ಪೀಠಕ್ಕೆ ನೀಡಬಹುದೇ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ವಿಸ್ತೃತ ಪೀಠಕ್ಕೆ ವಹಿಸುವುದು ಕೋರ್ಟ್ ಗೆ ಬಿಟ್ಟ ವಿಚಾರ. ಆದರೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ವರ್ಷದಲ್ಲಿ 2 ತಿಂಗಳು ಮಾತ್ರ ಬಾಕಿ ಇದೆ ಎಂದು ಅರ್ಜಿದಾರರ ಪರ ಸಂಜಯ್ ಹೆಗ್ಡೆ ವಾದ ಮಂಡಿಸಿದ್ದಾರೆ.
ಸರ್ಕಾರದ ಪರ ವಕೀಲ ಎಜಿ ಪ್ರಭುಲಿಂಗ ನಾವದಗಿ ವಾದ ಮಂಡಿಸಿ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವಹಿಸುವುದು ಕೋರ್ಟ್ ವಿವೇಚನೆಗೆ ಬಿಟ್ಟಿದ್ದು. ಕಾನೂನು ವಿಷಯವನ್ನು ನ್ಯಾಯಾಲಯವೇ ವಿಚಾರಿಸಬೇಕು. ಅಲ್ಲದೇ, ಎಲ್ಲರೂ ಕೋರ್ಟ್ ತೀರ್ಪಿಗಾಗಿ ಎದುರು ನೋಡುತ್ತಿದ್ದಾರೆ. ಯಾವ ತೀರ್ಪನ್ನಾದರೂ ಕೊಡಿ, ಬೇಗ ತೀರ್ಪು ನೀಡಿ ಎಂದು ಕೇಳಿಕೊಂಡಿದ್ದಾರೆ.
ಕೊನೆಗೆ ಈ ಪ್ರಕರಣದ ವಿಚಾರಣೆ ದೀರ್ಘವಾಗಿರುವ ಕಾರಣ ಯಾವುದೇ ಮಧ್ಯಂತರ ಆದೇಶ ನೀಡುವುದಿಲ್ಲ. ಮುಖ್ಯ ನಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ಮಾಡಲಾಗುವುದು ಎಂದು ನ್ಯಾ. ಕೃಷ್ಣ ದೀಕ್ಷಿತ್ ತಿಳಿಸಿದರು.










