ನವದೆಹಲಿ : ಕರ್ನಾಟಕದ ಶಾಲಾ-ಕಾಲೇಜುಗಳ ತರಗತಿಯೊಳಗೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ನಿಷೇಧಿಸಿ ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಇಂದು ಪ್ರಕಟಿಸಿದೆ. ಸುಪ್ರೀಂ ಕೋರ್ಟ್ನಿಂದ ಭಿನ್ನ ತೀರ್ಪು ಪ್ರಕಟವಾಗಿದ್ದು, ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಪೀಠಕ್ಕೆ ವರ್ಗಾವಣೆಯಾಗಿದೆ.
ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ನ್ಯಾಯಪೀಠ ಇಂದು ತೀರ್ಪು ಪ್ರಕಟಿಸಿದೆ. ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದರೆ ನ್ಯಾಯಮೂರ್ತಿ ಸುಧಾಂಶು ಧುಲಿಯಾ ವಜಾಗೊಳಿಸಿದರು.
ನನ್ನ ಆದೇಶದಲ್ಲಿ 11 ಪ್ರಶ್ನೆಗಳನ್ನು ರೂಪಿಸಲಾಗಿದೆ. ಅದರಲ್ಲಿ ಅರ್ಜಿಗಳ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ನಾನು ಅರ್ಜಿಗಳನ್ನು ವಜಾಗೊಳಿಸಲು ಪ್ರಸ್ತಾಪಿಸುತ್ತೇನೆ ಎಂದ ನ್ಯಾ. ಹೇಮಂತ್ ಗುಪ್ತಾ ಅವರು ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿಹಿಡಿದರು. ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿದ್ದ ಎಲ್ಲ 26 ಅರ್ಜಿಗಳನ್ನು ಅವರು ವಜಾಗೊಳಿಸಿದರು.
ಅಗತ್ಯ ಧಾರ್ಮಿಕ ಆಚರಣೆಗಳ ಸಂಪೂರ್ಣ ಪರಿಕಲ್ಪನೆಯು ಈ ಹಿಜಾಬ್ ವಿವಾದಕ್ಕೆ ಅಗತ್ಯವಾಗಿಲ್ಲ. ಹೈಕೋರ್ಟ್ ತಪ್ಪು ದಾರಿ ತೆಗೆದುಕೊಂಡಿದೆ. ಇದು ಅಂತಿಮವಾಗಿ 14 ಮತ್ತು 19ನೇ ವಿಧಿಗಳ ನಡುವಿನ ಆಯ್ಕೆಯಾಗಿದೆ. ಇದು ಆಯ್ಕೆಯ ವಿಷಯ. ಅದಕ್ಕಿಂತ ಹೆಚ್ಚೂ ಅಲ್ಲ ಅಥವಾ ಕಡಿಮೆಯೂ ಅಲ್ಲ ಎಂದು ನ್ಯಾ. ಸುಧಾಂಶು ಧುಲಿಯಾ ಹೇಳಿದರು.
ನನ್ನ ಮನಸ್ಸಿನಲ್ಲಿರುವ ಅತ್ಯಂತ ಮುಖ್ಯವಾದ ಪ್ರಶ್ನೆಯೆಂದರೆ ಹೆಣ್ಣುಮಗುವಿನ ಶಿಕ್ಷಣ. ನಾವು ಆಕೆಯ ಜೀವನವನ್ನು ಉತ್ತಮಗೊಳಿಸುತ್ತಿದ್ದೇವೆಯೇ? ಇದು ನನ್ನ ಮನದಲ್ಲಿರುವ ಪ್ರಶ್ನೆ. ಕರ್ನಾಟಕ ಸರ್ಕಾರ ಫೆ. 5ರಂದು ಜಾರಿಗೊಳಿಸಿದ ಆದೇಶವನ್ನು ನಾನು ವಜಾಗೊಳಿಸಿದ್ದೇನೆ ಮತ್ತು ನಿರ್ಬಂಧಗಳನ್ನು ತೆಗೆದುಹಾಕಲು ಆದೇಶಿಸುತ್ತೇನೆ ಎಂದು ಧುಲಿಯಾ ತಮ್ಮ ತೀರ್ಪಿನಲ್ಲಿ ತಿಳಿಸಿದರು.










