ಹುಬ್ಬಳ್ಳಿ : ವಿವಿಧ ಕಂಪನಿಯ ಲಕ್ಷಾಂತರ ಬೆಲೆ ಬಾಳುವ ಮೊಬೈಲ್ ಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ರವೀಂದ್ರ ಬಸವರಾಜ ಭೋವಿ, ರಂಗಪ್ಪ ತಿಮ್ಮಣ್ಣ ಭೋವಿ ಹಾಗೂ ತುಮಕೂರು ಜಿಲ್ಲೆಯ ಪಾವಗಡದ ರಾಘವೇಂದ್ರ ಎಂದು ಗುರುತಿಸಲಾಗಿದ್ದು, ಬಂಧಿತರಿಂದ ವಿವಿಧ ಕಂಪನಿಯ 2,78,000 ರೂ. ಮೌಲ್ಯದ 22 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಪ್ರಕರಣವನ್ನು ಭೇದಿಸಿದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಯವರ ಈ ಉತ್ತಮ ಕಾರ್ಯ ವೈಖರಿಯನ್ನು ಪೊಲೀಸ್ ಆಯುಕ್ತ ಲಾಬೂರಾಮ್ ಶ್ಲಾಘಿಸಿದ್ದಾರೆ.










