ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಶಿಶುವಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮರುಜೀವ ನೀಡಿದ ವೈದ್ಯರು…

137
firstsuddi

ಧಾರವಾಡ : ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ 20 ದಿನದ ಮಗುವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಧಾರವಾಡದ ನಾರಾಯಣ ಹೃದಯಾಲಯದ ವೈದ್ಯರು ಮರುಜೀವ ನೀಡಿದ್ದಾರೆ. ಹುಬ್ಬಳ್ಳಿ ಮೂಲದ ಮಗು ಹುಟ್ಟುವಾಗ ಕೇವಲ 2.3 ಕೆ.ಜಿ ತೂಕವಿತ್ತು. ಹುಟ್ಟಿದ ಕೂಡಲೇ ಮಗುವಿನ ಹೃದಯದಲ್ಲಿ ರಕ್ತ ಪರಿಚಲನೆ ಸಮಸ್ಯೆ ಕಂಡುಬಂದಿದ್ದರಿಂದ ಧಾರವಾಡದ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿತ್ತು. ಬಳಿಕ ಮಗುವನ್ನು ತಪಾಸಣೆ ನಡೆಸಿದ ವೇಳೆ ಮಹಾಪದಮನಿಯಲ್ಲಿ ಶೇ. 65ರಷ್ಟು ಸಮಸ್ಯೆಯಿರುವುದು ಕಂಡು ಬಂದ ಹಿನ್ನೆಲೆ, ಶಸ್ತ್ರಚಿಕಿತ್ಸೆ ಮಾಡಬೇಕಾಗಿತ್ತು. ಈ ಹಿನ್ನೆಲೆ ಶಸ್ತ್ರಚಿಕಿತ್ಸೆ ನಡೆಸಿದ ಚಿಕ್ಕಮಕ್ಕಳ ಹೃದಯ ರೋಗ ತಜ್ಞ ಡಾ. ಅರುಣ್ ಕೆ. ಬಬ್ಲೇಶ್ವರ ಹಾಗೂ ವಯಸ್ಕ ಹಾಗೂ ಹಿರಿಯ ಮುಖ್ಯ ಹೃದಯ ಶಸ್ತ್ರಚಿಕಿತ್ಸಕ ಡಾ. ರವಿವರ್ಮ ಪಾಟೀಲ್ ಹಾಗೂ ಹೃದಯ ಅರವಳಿಕೆ ತಜ್ಞರ ತಂಡ ಮಗುವಿನ ಮಹಾಪದಮನಿಯಲ್ಲಿದ್ದ ಪ್ರಮುಖ ತಡೆಯನ್ನು ತೆರವುಗೊಳಿಸಿ ಅಪಾಯದಲ್ಲಿದ್ದ ಮಗುವಿಗೆ ಮರುಜೀವ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ವೈದ್ಯರ ಈ ಕಾರ್ಯಕ್ಕೆ ಮಗುವಿನ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.