ಹೆಚ್‍ಡಿಕೆಗೆ ಡ್ರಾಮಾ ಮಾಡಿ ಅಭ್ಯಾಸ ಇರಬೇಕು, ಏಟು ತಿಂದ ನಾನ್ಯಾಕೆ ಡ್ರಾಮಾ ಮಾಡ್ಲಿ : ಪರಮೇಶ್ವರ್ ತಿರುಗೇಟು…

56
firstsuddi

ತುಮಕೂರು : ಕುಮಾರಸ್ವಾಮಿ ಅವರಿಗೆ ಡ್ರಾಮಾ ಮಾಡಿ ಅಭ್ಯಾಸ ಇರಬೇಕು. ಏಟು ತಿಂದವನು ನಾನು, ನಾನ್ಯಾಕೆ ಡ್ರಾಮಾ ಮಾಡಲಿ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದರು.

ಜಿ.ಪರಮೇಶ್ವರ್ ನಾಟಕ ಮಾಡುತ್ತಾರೆ ಎಂಬ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು, ನಾನ್ಯಾಕೆ ಡ್ರಾಮಾ ಮಾಡಲಿ. ನನಗೆ ಡ್ರಾಮಾ ಮಾಡೋ ಅಗತ್ಯವಿಲ್ಲ. ಅತ್ತು ಕರೆದು ಡ್ರಾಮಾ ಮಾಡಲ್ಲ ಎಂದರು.

ನಿನ್ನೆ ಸಂಜೆ ಭೈರೆನಹಳ್ಳಿ ಬಳಿ ಚುನಾವಣಾ ಪ್ರಚಾರಕ್ಕೆ ಬಂದಿದ್ದೆ. ಈ ವೇಳೆ ಸಾವಿರಾರು ಜನ ಕಾರ್ಯಕರ್ತರು ಇದ್ದರು. ನನ್ನನ್ನ ಮೇಲಿತ್ತಿಕೊಂಡರು. ಜೆಸಿಬಿಯಿಂದ ಮೇಲೆಯಿಂದ ಹೂ ಹಾಕುತ್ತಿದ್ದರು. ಈ ವೇಳೆ ನನ್ನ ತಲೆಯಲ್ಲಿ ರಕ್ತ ಬರೋಕೆ ಶುರುವಾಯಿತು. ತುಂಬಾ ರಕ್ತ ಬಂತು. ಅಲ್ಲೇ ನಮ್ಮ ಆಸ್ಪತ್ರೆ ವೈದ್ಯರು ನನ್ನ ಭೇಟಿ ಮಾಡೋಕೆ ಬಂದಿದ್ದರು. ಈ ವೇಳೆ ಅವರೇ ಕೂಡಲೇ ಚಿಕಿತ್ಸೆ ನೀಡಿದರು. ಬಳಿಕ ಅಕ್ಕಿರಾಂಪುರದ ಆರೋಗ್ಯ ಕೇಂದ್ರಕ್ಕೆ ಕರೆತಂದರು ಎಂದು ಹೇಳಿದರು.

ನಾನು 35 ವರ್ಷ ರಾಜಕಾರಣ ಮಾಡಿದ್ದೀನಿ, ನನಗೆ ಶತ್ರುಗಳು ಎನ್ನುವುದು ಬಹಳ ಕಡಿಮೆ. ಚುನಾವಣೆಯಲ್ಲಿ ಇಂತಹದ್ದು ನಡೆಯಬಾರದು. ದ್ವೇಷವಿದ್ದರೆ ಅದನ್ನು ತೀರಿಸಿಕೊಳ್ಳಲು ಇಂತಹ ಕೆಲಸ ಮಾಡಬಾರದು ಎಂದು ಬೇಸರ ವ್ಯಕ್ತಪಡಿಸಿದರು. ಘಟನೆ ಹೇಗಾಯ್ತು ಅನ್ನೋದನ್ನ ಹೇಳೋದು ಕಷ್ಟ. ಹೂವಿನಲ್ಲಿ ಕಲ್ಲು ಬಂದಿಲ್ಲ. ಯಾರೋ ದುಷ್ಕರ್ಮಿಗಳು ಎಸೆದಿದ್ದಾರೆ. ಸೂಕ್ತ ತನಿಖೆ ನಡೆಸುವಂತೆ ಎಸ್ ಪಿಗೆ ತಿಳಿಸಿದ್ದೇನೆ. ಪೊಲೀಸರ ತನಿಖೆ ಬಳಿಕ ಎಲ್ಲ ಗೊತ್ತಾಗಲಿದೆ ಎಂದರು.

1999ರ ವಿಜಯೋತ್ಸವ ವೇಳೆ ಚಾಕು ತಗೊಂಡ್ ತಿವಿಯಲು ಯತ್ನಿಸಿದರು. ಇದು ರಾಜಕೀಯ ವಿರೋಧಿಗಳ ಕೃತ್ಯನಾ ಎಂದು ಹೇಳುವುದಕ್ಕೆ ಆಗುವುದಿಲ್ಲ. ಊಹೆ ಮಾಡುವುದಕ್ಕೂ ಆಗಲ್ಲ. ತಲೆಯಲ್ಲಿ 1 ರಿಂದ 1.5 ಇಂಚು ಗಾಯವಾಗಿದೆ. ವೈದ್ಯರು ಚಿಕಿತ್ಸೆ ಕೊಟ್ಟಿದ್ದಾರೆ. ಕಾರ್ಯಕರ್ತರು ಶಾಂತಿಯಿಂದ ಇರಬೇಕು. ನನಗೆ ಭದ್ರತೆಯ ಅವಶ್ಯಕತೆ ಬೇಕು ಅಂತ ಅಂದುಕೊಂಡಿರಲಿಲ್ಲ. ಖಂಡಿತ ನನಗೆ ಯಾವುದೇ ಭಯವಿಲ್ಲ. ನನಗೆ ಯಾವುದೇ ತೊಂದರೆಯಾದರೂ ಎದುರಿಸುತ್ತೇನೆ ಎಂದರು.